ADVERTISEMENT

ಕಂದಾಯ ನಿರೀಕ್ಷಕ ಹುದ್ದೆ ಆಮಿಷ: ₹ 47 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 5:21 IST
Last Updated 19 ಫೆಬ್ರುವರಿ 2023, 5:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಂದಾಯ ನಿರೀಕ್ಷಕಹಾಗೂ ಅಗ್ನಿಶಾಮಕ ಅಧಿಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ₹ 47 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೆಂಗೇರಿಯ ಹರೀಶ್ ಎಂಬುವವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎಚ್‌.ಆರ್. ವೀರಭದ್ರ ಅಲಿಯಾಸ್ ಭದ್ರ ಹಾಗೂ ತೇಜಸ್ ಎಂಬುವವರ ವಿರುದ್ಧ ಎಫ್‌ಐಆರ್‌ ದಾ ಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಹರೀಶ್ ಅವರಿಗೆ ಸ್ನೇಹಿತರೊಬ್ಬರ ಮೂಲಕ ಆರೋ‍ಪಿ ವೀರಭದ್ರ ಪರಿಚಯವಾಗಿತ್ತು. ಪರಿಚಯಸ್ಥ ತೇಜಸ್ ಮೂಲಕ ಸರ್ಕಾರಿ ಕೆಲಸ ಕೊಡಿಸುವುದಾಗಿ ವೀರಭದ್ರ ಹೇಳಿದ್ದ. ಹರೀಶ್ ಅವರ ಸಂಬಂಧಿಕರಿಬ್ಬರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅವರಿಬ್ಬರಿಗೆ ಕೆಲಸ ಕೊಡಿಸುವುದಕ್ಕಾಗಿ ವೀರಭದ್ರ ಜೊತೆ ಹರೀಶ್ ಮಾತುಕತೆ ನಡೆಸಿದ್ದರು.’

ADVERTISEMENT

‘ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಪೌರಾಡಳಿತ ನಿರ್ದೇಶನಾಲಯದಲ್ಲಿ ಕಂದಾಯ ನಿರೀಕ್ಷಕ (ಆರ್.ಐ) ಹುದ್ದೆಗಳು ಖಾಲಿ ಇರುವುದಾಗಿ ವೀರಭದ್ರ ಹೇಳಿದ್ದ. ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವಿಗಳು ಪರಿಚಯವಿದ್ದು, ಹಣ ನೀಡಿದರೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ಮಾತು ನಂಬಿದ್ದ ಹರೀಶ್, ಹಂತ ಹಂತವಾಗಿ ₹ 47 ಲಕ್ಷ ನೀಡಿದ್ದರು. ಹಣ ಪಡೆದಿದ್ದ ಆರೋಪಿ, ಯಾವುದೇ ಕೆಲಸ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ನೀಡಿರಲಿಲ್ಲ. ವಂಚನೆಗೀಡಾಗಿದ್ದು ಗೊತ್ತಾಗುತ್ತಿದ್ದಂತೆ ಹರೀಶ್ ಠಾಣೆಗೆ ದೂರು
ನೀಡಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.