ADVERTISEMENT

ಬೆಂಗಳೂರು: ‘ಪರಾಮರ್ಶನ’ ಗ್ರಂಥಾಲಯ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 16:08 IST
Last Updated 6 ಜೂನ್ 2025, 16:08 IST
ಕಾರ್ಯಕ್ರಮದಲ್ಲಿ ಕಾ.ತ. ಚಿಕ್ಕಣ್ಣ ಅವರು ಎಂ.ಎನ್. ವೆಂಕಟೇಶ್ ಅವರ ಜತೆಗೆ ಸಮಾಲೋಚನೆ ನಡೆಸಿದರು. ಎಂ. ಗಾಯತ್ರಿ, ಎಲ್. ಹನುಮಂತಯ್ಯ, ಕೆ.ವಿ. ನಾಗರಾಜಮೂರ್ತಿ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಕಾ.ತ. ಚಿಕ್ಕಣ್ಣ ಅವರು ಎಂ.ಎನ್. ವೆಂಕಟೇಶ್ ಅವರ ಜತೆಗೆ ಸಮಾಲೋಚನೆ ನಡೆಸಿದರು. ಎಂ. ಗಾಯತ್ರಿ, ಎಲ್. ಹನುಮಂತಯ್ಯ, ಕೆ.ವಿ. ನಾಗರಾಜಮೂರ್ತಿ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಮಲ್ಲತ್ತಹಳ್ಳಿಯ ಕಲಾಗ್ರಾಮದ ತನ್ನ ಕೇಂದ್ರದಲ್ಲಿ ನಿರ್ಮಿಸಿರುವ ‘ಪರಾಮರ್ಶನ’ ಗ್ರಂಥಾಲಯವನ್ನು ಕಾರ್ಯಾರಂಭಿಸಿದೆ.

ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗ್ರಂಥಾಲಯ ಉದ್ಘಾಟನೆಗೊಂಡಿತು. ಈ ವೇಳೆ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ, ‘ಕನಕ ಸಾಹಿತ್ಯ, ಕೀರ್ತನ ಸಾಹಿತ್ಯ, ತತ್ವಪದ ಸಾಹಿತ್ಯ, ಭಕ್ತಿ ಸಾಹಿತ್ಯ ಮತ್ತು ಸಂತ–ಶರಣರ ಸಾಹಿತ್ಯ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯ. ಸದ್ಯ ಈ ಕ್ಷೇತ್ರಕ್ಕೆ ಸಂಬಂಧಿಸಿದ 1,500 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ’ ಎಂದು ಹೇಳಿದರು. 

‘ಗ್ರಂಥಾಲಯವು ಕಚೇರಿ ದಿನಗಳಲ್ಲಿ ಬೆಳಿಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಯಾವುದೇ ಶುಲ್ಕ ಇರುವುದಿಲ್ಲ. ಆದರೆ, ಪುಸ್ತಕವನ್ನು ಎರವಲು ನೀಡುವುದಿಲ್ಲ. ನಿಗದಿತ ಪುಟಗಳ ಜೆರಾಕ್ಸ್ ಪ್ರತಿ ಪಡೆಯಲು ಅವಕಾಶವಿದೆ’ ಎಂದರು.

ADVERTISEMENT

‘ಪುಸ್ತಕಗಳ ಸಂಗ್ರಹಕಾರ್ಯ ನಿರಂತರ ಪ್ರಕ್ರಿಯೆಯಾಗಿದೆ. ಸಂಸ್ಥೆಗಳು, ವಿದ್ವಾಂಸರು ಹಾಗೂ ಸಾರ್ವಜನಿಕರು ನಿಗದಿತ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳ ಒಂದೊಂದು ಪ್ರತಿ ಒದಗಿಸಿದರೂ ಗ್ರಂಥಾಲಯವನ್ನು ಮತ್ತಷ್ಟು ವಿಸ್ತರಿಸಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.  

ಪ್ರಮುಖರು ಭಾಗಿ: ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎಂ. ಎನ್. ವೆಂಕಟೇಶ್, ನಿರ್ದೇಶಕಿ ಕೆ.ಎಂ.ಗಾಯತ್ರಿ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಎ.ಆರ್. ಗೋವಿಂದಸ್ವಾಮಿ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ, ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಅಗ್ರಹಾರ ಕೃಷ್ಣಮೂರ್ತಿ, ಎಲ್. ಹನುಮಂತಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಎಸ್.ಜಿ. ಸಿದ್ಧರಾಮಯ್ಯ, ಬಿ.ಟಿ. ಲಲಿತಾನಾಯಕ್, ಡಾ. ವಸುಂಧರಾ ಭೂಪತಿ, ಎಂ.ಎಸ್. ಆಶಾದೇವಿ, ಶೂದ್ರ ಶ್ರೀನಿವಾಸ್, ಎಸ್.ಆರ್. ವಿಜಯಶಂಕರ, ಜಾಣಗೆರೆ ವೆಂಕಟರಾಮಯ್ಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.