ADVERTISEMENT

ರಾಜೀವ್‌ಗಾಂಧಿ ವಿ.ವಿ ಲಾಂಛನದಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ: ಬಿಳಿಮಲೆ ಅಸಮಾಧಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 15:51 IST
Last Updated 28 ಜನವರಿ 2026, 15:51 IST
ಸಭೆಯಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಡಾ. ಭಗವಾನ್ ಬಿ.ಸಿ., ಸಿ. ಅರ್ಜುನ್ ಒಡೆಯರ್, ಡಾ. ರಿಯಾಜ್ ಬಾಷಾ, ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು 
ಸಭೆಯಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದರು. ಡಾ. ಭಗವಾನ್ ಬಿ.ಸಿ., ಸಿ. ಅರ್ಜುನ್ ಒಡೆಯರ್, ಡಾ. ರಿಯಾಜ್ ಬಾಷಾ, ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು    

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಲಾಂಛನದಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕೂಡಲೇ ಈ ಬಗ್ಗೆ ಕ್ರಮಕೈಗೊಂಡು ಕನ್ನಡಕ್ಕೆ ಮೊದಲ ಸ್ಥಾನ ಒದಗಿಸಬೇಕು ಎಂದು ವಿ.ವಿ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. 

ವಿಶ್ವವಿದ್ಯಾಲಯದಲ್ಲಿ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆಯನ್ನು ಬುಧವಾರ ನಡೆಸಿದ ಅವರು, ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಪ್ರಕಾರ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಲಾಂಛನದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ ಒದಗಿಸುವುದಕ್ಕೆ ಸಂಬಂಧಿಸಿದಂತೆ ಕೂಡಲೇ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಬೇಕು. ಈ ಲಾಂಛನದಲ್ಲಿ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತ ಮಾಹಿತಿ ಕೇವಲ ಇಂಗ್ಲಿಷ್ ಭಾಷೆಯಲ್ಲಿದ್ದು, ಇದನ್ನು ಸಹ ಸರಿಪಡಿಸಬೇಕು’ ಎಂದರು. 

‘ವಿ.ವಿ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಅಂಕಪಟ್ಟಿಗಳಲ್ಲಿ ಕೇವಲ ಇಂಗ್ಲಿಷ್ ಮಾತ್ರ ಇದ್ದು, ಇದು ಕನ್ನಡದಲ್ಲಿಯೂ ಇರುವಂತೆ ಪರಿಷ್ಕರಿಸಬೇಕು’ ಎಂದು ತಿಳಿಸಿದ ಅವರು, ಪದವಿ ಪ್ರಮಾಣಪತ್ರಗಳನ್ನು ದ್ವಿಭಾಷೆಯಲ್ಲಿ ವಿತರಿಸುತ್ತಿರುವ ಕ್ರಮವನ್ನು ಶ್ಲಾಘಿಸಿದರು.

ADVERTISEMENT

‘ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯ ನಿಗದಿಪಡಿಸಿದ್ದರೂ, ಅಂಕಗಳಿಕೆಗೆ ಅದನ್ನು ಪರಿಗಣಿಸದ ಕಾರಣ ಕನ್ನಡ ಕಲಿಕೆಯಲ್ಲಿ ಗಂಭೀರತೆ ಇಲ್ಲವಾಗಿದೆ. ಕನ್ನಡೇತರ ವಿದ್ಯಾರ್ಥಿಗಳು ಪಠ್ಯದ ಅನುಸಾರ ಕನ್ನಡ ಕಲಿತು, ಪರೀಕ್ಷೆಯಲ್ಲಿ ತೇರ್ಗಡೆ ಆಗುವುದನ್ನು ಕಡ್ಡಾಯ ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಕ್ರಮಕೈಗೊಳ್ಳಬೇಕು’ ಎಂದರು. 

‘ವಿಶ್ವವಿದ್ಯಾಲಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನೊಳಗೊಂಡ ಕನ್ನಡ ಘಟಕಗಳನ್ನು ಸ್ಥಾಪಿಸಬೇಕು. ಜಾಲತಾಣದಲ್ಲಿ ಕನ್ನಡ ಭಾಷೆ ತಪ್ಪಾಗದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು. 

‘ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರು ಮತ್ತು ಜ್ಞಾನದ ನಡುವಿನ ಕಂದಕ ತಗ್ಗಿಸಲು ವಿಶ್ವವಿದ್ಯಾಲಯವು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಪ್ರಕಟಿಸಬೇಕು. ವೈದ್ಯರು ತಮ್ಮ ವೈದ್ಯಕೀಯ ಅನುಭವ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಹೊರತರಬೇಕು’ ಎಂದು ಹೇಳಿದರು. 

ಸಭೆಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ಕುಲಸಚಿವ ಸಿ. ಅರ್ಜುನ್ ಒಡೆಯರ್, ಕುಲಸಚಿವ (ಮೌಲ್ಯಮಾಪನ) ಡಾ. ರಿಯಾಜ್ ಬಾಷಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ.ಎಸ್. ಫಣಿಕುಮಾರ್, ವೈದ್ಯರಾದ ಡಾ.ಸಿ.ಎ ಕಿಶೋರ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.