ADVERTISEMENT

ಬಾಲ್ಯ ಸ್ನೇಹಿತನ ಜೊತೆ ರಿಕ್ಕಿ ರೈ ಪಾರ್ಟಿ

ಸಿಸಿಬಿ ಕಚೇರಿಯಲ್ಲಿ ವಿಚಾರಣೆ; ಹೇಳಿಕೆ ಪಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 19:51 IST
Last Updated 7 ಅಕ್ಟೋಬರ್ 2020, 19:51 IST
ವಿಚಾರಣೆಗೆ ಹಾಜರಾಗಲು ಬುಧವಾರ ಸಿಸಿಬಿ ಕಚೇರಿಗೆ ಬಂದ ರಿಕ್ಕಿ ರೈ
ವಿಚಾರಣೆಗೆ ಹಾಜರಾಗಲು ಬುಧವಾರ ಸಿಸಿಬಿ ಕಚೇರಿಗೆ ಬಂದ ರಿಕ್ಕಿ ರೈ   

ಬೆಂಗಳೂರು: ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ, ಡ್ರಗ್ಸ್ ಜಾಲ ಪ್ರಕರಣದ ಆರೋಪಿಯೂ ಆದ ಬಾಲ್ಯ ಸ್ನೇಹಿತ ಆದಿತ್ಯ ಆಳ್ವ ಜತೆ ಪಾರ್ಟಿ ಮಾಡುತ್ತಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿದೆ.

ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಟಿಯರು ಸೇರಿದಂತೆ ಹಲವರ ಬಂಧನವಾಗಿದೆ. ಆದರೆ, ಆದಿತ್ಯ ಆಳ್ವ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಆತನಿಗೆ ತಲೆಮರೆಸಿಕೊಳ್ಳಲು ರಿಕ್ಕಿ ಸಹಾಯ ಮಾಡಿದ್ದ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು.

ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು, ರಿಕ್ಕಿಗೆ ಸೇರಿದ್ದ ಸದಾಶಿವನಗರ ಹಾಗೂ ಬಿಡದಿಯಲ್ಲಿರುವ ಮನೆ ಮೇಲೆ ಸಿಸಿಬಿ ಪೊಲೀಸರು ಮಂಗಳವಾರವಷ್ಟೇ ದಾಳಿ ಮಾಡಿದ್ದರು. ಮೊಬೈಲ್ ಹಾಗೂ ಹಾರ್ಡ್‌ ಡಿಸ್ಕ್ ಜಪ್ತಿ ಮಾಡಿದ್ದರು. ರಿಕ್ಕಿ ಅವರನ್ನು ವಶಕ್ಕೆ ಪಡೆದು ರಾತ್ರಿ ಬಿಟ್ಟು ಕಳುಹಿಸಿದ್ದರು. ಪುನಃ ವಿಚಾರಣೆಗೆ ಬರುವಂತೆ ನೋಟಿಸ್ ಸಹ ನೀಡಿದ್ದರು.

ADVERTISEMENT

ಬುಧವಾರ ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯಲ್ಲಿರುವ ಕಚೇರಿಗೆ ಬಂದ ರಿಕ್ಕಿ, ರಾತ್ರಿಯವರೆಗೂ ವಿಚಾರಣೆ ಎದುರಿಸಿದರು. ಸಿಸಿಬಿಯ ಎಸಿಪಿ ಹಾಗೂ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ವಿಚಾರಣೆ ನಡೆಯಿತು. ರಿಕ್ಕಿ ಅವರಿಂದ ಮೂರು ಪುಟಗಳ ಹೇಳಿಕೆ ಪಡೆದು ವಾಪಸು ಕಳುಹಿಸಲಾಯಿತು. ಗುರುವಾರವೂ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ.

ಹಲವು ಬಾರಿ ಪಾರ್ಟಿ; ‘ರಿಕ್ಕಿ ಹಾಗೂ ಆದಿತ್ಯ, ಸದಾಶಿವನಗರದಲ್ಲಿ ಅಕ್ಕ– ಪಕ್ಕದ ಮನೆಯಲ್ಲೇ ವಾಸವಿದ್ದಾರೆ. ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲ್ಯಾಟ್‌ವೊಂದರಲ್ಲಿ ಅವರಿಬ್ಬರು ಆಗಾಗ ಪಾರ್ಟಿ ಮಾಡುತ್ತಿದ್ದರು. ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸುತ್ತಿದ್ದ ಬಗ್ಗೆ ಅನುಮಾನವಿದ್ದು, ಖಚಿತವಾಗಿಲ್ಲ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ವಿದೇಶದಲ್ಲಿ ನಡೆದಿದ್ದ ಪಾರ್ಟಿಗಳಲ್ಲೂ ಅವರಿಬ್ಬರು ಭಾಗಿಯಾಗುತ್ತಿದ್ದರು. ಈ ಬಗ್ಗೆ ರಿಕ್ಕಿ ಅವರಿಂದ ಹೇಳಿಕೆ ಪಡೆಯಲಾಗಿದೆ’ ಎಂದೂ ಮೂಲಗಳು ಹೇಳಿವೆ.

ಸ್ನೇಹಿತ ಸಂಪರ್ಕಕ್ಕೆ ಸಿಕ್ಕಿಲ್ಲ; ‘ಕಳೆದ ಸೆಪ್ಟೆಂಬರ್‌ನಲ್ಲಿ ಕೊನೆ ಬಾರಿ ಆದಿತ್ಯನನ್ನು ಭೇಟಿಯಾಗಿದ್ದೆ.ಇತ್ತೀಚಿನ ದಿನಗಳಲ್ಲಿ ಅತನನ್ನು ಭೇಟಿಯಾಗುತ್ತಿರಲಿಲ್ಲ. ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ರಿಕ್ಕಿ ವಿಚಾರಣೆಯಲ್ಲ ಹೇಳಿರುವುದಾಗಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.