ADVERTISEMENT

ಅಪಘಾತಗಳಿಗೆ ಜನಸಂಖ್ಯೆ ಕಾರಣ: ರಸ್ತೆ ಸುರಕ್ಷತಾ ಸಲಹೆಗಾರ ಡಾ.ಜಿ.ಗುರುರಾಜ್‌ ಆತಂಕ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:34 IST
Last Updated 14 ಜನವರಿ 2026, 15:34 IST
<div class="paragraphs"><p>‘ಬೆಂಗಳೂರು ವಕೀಲರ ಸಂಘ’ದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಅವರಿಗೆ ಪುಸ್ತಕ ಸ್ಮರಣಿಕೆ ನೀಡಿದರು. ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಇದ್ದಾರೆ.</p></div>

‘ಬೆಂಗಳೂರು ವಕೀಲರ ಸಂಘ’ದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌ ಅವರಿಗೆ ಪುಸ್ತಕ ಸ್ಮರಣಿಕೆ ನೀಡಿದರು. ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಇದ್ದಾರೆ.

   

ಬೆಂಗಳೂರು: ‘ರಸ್ತೆ ಅಪಘಾತಗಳು ಮತ್ತು ಸಾವು–ನೋವುಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರೂ ಪ್ರಯೋಜನ ಆಗುತ್ತಿಲ್ಲ. ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದಕ್ಕೆ ಸಮಾನಾಂತರವಾದ ವಾಹನಗಳ ಸಂಖ್ಯೆಯಿಂದಾಗಿ ಭಾರತದಲ್ಲಿ ಪ್ರತಿವರ್ಷವೂ ರಸ್ತೆ ಅಪಘಾತಗಳ ಪ್ರಮಾಣ ಶೇ 8ರಿಂದ 9ರಷ್ಟು ಹೆಚ್ಚುತ್ತಿದೆ’ ಎಂದು ‘ನಿಮ್ಹಾನ್ಸ್‌’ನ ಹಿರಿಯ ಪ್ರಾಧ್ಯಾಪಕ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ರಸ್ತೆ ಸುರಕ್ಷತಾ ಸಲಹೆಗಾರ ಡಾ.ಜಿ.ಗುರುರಾಜ್‌ ಆತಂಕ ವ್ಯಕ್ತಪಡಿಸಿದರು.

‘ಬೆಂಗಳೂರು ವಕೀಲರ ಸಂಘ’ದ (ಎಎಬಿ) ವತಿಯಿಂದ ಹೈಕೋರ್ಟ್‌ನಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ರಸ್ತೆ ಸುರಕ್ಷಾ ಜಾಗೃತಿ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ರಸ್ತೆ ಸುರಕ್ಷತೆ ಎಂಬುದು ಭಾರತದಲ್ಲಿ ಘೋಷಣೆಯಾಗಿಯೇ ಉಳಿದಿದೆ’ ಎಂದು ವಿಷಾದಿಸಿದರು.

ADVERTISEMENT

‘ಆಳುವ ಸರ್ಕಾರಗಳು ಬಜೆಟ್‌ನಲ್ಲಿ ರಸ್ತೆ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿವೆ. ಕರ್ನಾಟಕದಲ್ಲಿ ವರ್ಷವೊಂದಕ್ಕೆ 10 ಸಾವಿರಕ್ಕಿಂತಲೂ ಹೆಚ್ಚಿನ ಜನರು ದುರ್ಮರಣಕ್ಕೀಡಾಗುತ್ತಿದ್ದು, ಇವರಲ್ಲಿ ಬಳಹಷ್ಟು ಜನರು ಪಾದಚಾರಿ ಹಾಗೂ ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ. ಅದರಲ್ಲೂ ಶೇ 70ರಷ್ಟು ಯುವ ಜನಾಂಗವೇ ಇದಕ್ಕೆ ಬಲಿಯಾಗುತ್ತಿದ್ದು, ಶೇ 40ರಷ್ಟು ಅಪಘಾತಗಳು ಹೆದ್ದಾರಿಯಲ್ಲೇ ಸಂಭವಿಸುತ್ತಿವೆ. ಪರಿಣಾಮ ಅಂಗ ವೈಕಲ್ಯ ಮತ್ತು ಮೆದುಳು ಹಾನಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

‘ಪಾಶ್ಚಿಮಾತ್ಯ ದೇಶಗಳಲ್ಲಿ ರಸ್ತೆ ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿ ಅವುಗಳ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸಲಾಗಿದೆ. ಆದರೆ, ಭಾರತದಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಬಗ್ಗೆ ಅವಲೋಕಿಸಲು ಮತ್ತು ನಿಗಾ ವಹಿಸಲು 15 ವಿವಿಧ ಇಲಾಖೆಗಳಿವೆ. ಈತನಕ ಮೋಟಾರು ವಾಹನ ಕಾಯ್ದೆಗೆ 60ಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಆದರೆ, ಪರ್ಯಾಯ ರಸ್ತೆಗಳ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಆದ್ಯತೆ ದೊರಯುತ್ತಿಲ್ಲ. ಬಲಿಷ್ಠ ಸಂಸ್ಥೆ ಮತ್ತು ಪ್ರಾಧಿಕಾರಗಳ ಮೂಲಕ ಜನರ ಪ್ರಾಣ ಸುರಕ್ಷತೆಗೆ ಗಮನ ಹರಿಸುತ್ತಿಲ್ಲ’ ಎಂದರು.

‘ನಮ್ಮಲ್ಲಿ ಗುಣಮಟ್ಟದ ರಸ್ತೆಗಳಿಲ್ಲ. ರಸ್ತೆಗಳ ನಿರ್ವಹಣೆ ಮತ್ತು ವಿನ್ಯಾಸ ಸುರಕ್ಷಿತವಾಗಿಲ್ಲ. ಅಪಘಾತಗಳಿಗೆ ಸುಶಿಕ್ಷಿತ, ನಿರಕ್ಷರ ಕುಕ್ಷಿ ಎಂಬ ವ್ಯತ್ಯಾಸವೇ ಇಲ್ಲವಾಗಿದೆ. ಚಲ್ತಾ ಹೈ (ಏನಾದರೂ ಆಗಲಿ ನಡೆಯುತ್ತದೆ) ಮನೋಭಾವ ಬಿಡಬೇಕು. ಅಪಘಾತಕ್ಕೆ ಈಡಾದವರನ್ನು ಸಂರಕ್ಷಿಸುವ ವ್ಯಕ್ತಿಗಳ ಜೊತೆ ಪೊಲೀಸ್‌ ಠಾಣೆಗಳು ಜನಸ್ನೇಹಿಯಾಗಿ ವರ್ತಿಸಬೇಕು. ಕಾನೂನುಗಳನ್ನು ಬಿಗಿಗೊಳಿಸಬೇಕು’ ಎಂದು ತಿಳಿಸಿದರು.

‘ಸಣ್ಣ–ಸಣ್ಣ ತಪ್ಪುಗಳು ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದನ್ನೇ ಜನ ಮರೆತುಬಿಡುತ್ತಾರೆ. ಶೇ 50ರಷ್ಟು ವಾಹನಗಳು, ವೇಗಮಿತಿ ಪಾಲನೆ ಮಾಡದೇ ಇರುವುದೇ ರಸ್ತೆ ಅಪಘಾಗಳ ಅತಿದೊಡ್ಡ ಸಮಸ್ಯೆಯಾಗಿದೆ. ಇವುಗಳಲ್ಲಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರೇ ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ರಸ್ತೆ ಸುರಕ್ಷತೆ ಎಂಬುದು ವಿಜ್ಞಾನವೇ ಹೊರತು ಭಾವನಾತ್ಮಕ ವಿಚಾರ ಅಲ್ಲ’ ಎಂದು ಗುರುರಾಜ್‌ ವಿವರಿಸಿದರು.  

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್‌, ಎಸ್‌.ವಿಶ್ವಜಿತ್‌ ಶೆಟ್ಟಿ, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ, ಸಾರಿಗೆ ಇಲಾಖೆ ಆಯುಕ್ತ ಎ.ಎಂ.ಯೋಗೇಶ್‌, ಪೊಲೀಸ್‌ ಇಲಾಖೆ ಜಂಟಿ ಆಯುಕ್ತ ಕಾರ್ತಿಕ ರೆಡ್ಡಿ, ಹೈಕೋರ್ಟ್‌ನ ಹಿರಿಯ ವಕೀಲ ಎ.ಎನ್‌.ಕೃಷ್ಣಸ್ವಾಮಿ, ಸಂಘದ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಪ್ರವೀಣ್‌ ಗೌಡ, ಉಪಾಧ್ಯಕ್ಷ ಸಿ.ಎಸ್.ಗಿರೀಶ್‌ ಕುಮಾರ್, ಖಜಾಂಚಿ ಶ್ವೇತಾ ರವಿಶಂಕರ್, ಪದಾಧಿಕಾರಿಗಳಾದ ಕೆ.ಚಂದ್ರಕಾಂತ ಪಾಟೀಲ್‌, ಬಿ.ಆರ್.ಹರಿಣಿ, ಆ‌ತ್ಮ ವಿ.ಹಿರೇಮಠ, ಎಚ್‌.ಎನ್‌.ತಮ್ಮಯ್ಯ ಇತರರು ಇದ್ದರು.

ಎಲ್ಲೆಂದರಲ್ಲಿ ಮದ್ಯದಂಗಡಿಗಳು..!

‘ರಸ್ತೆ ಅಪಘಾತಗಳಲ್ಲಿ ಪ್ರಮುಖ ಕಾರಣ ರಸ್ತೆ ನಿಯಮಗಳ ಪಾಲನೆ ಮಾಡದೇ ಇರುವುದು, ಮದ್ಯ ಸೇವಿಸಿ ವಾಹನ ಚಲಾಯಿಸುವುದು, ವಾಹನ ಓಡಿಸುವಾಗ ಮೊಬೈಲ್ ಬಳಕೆ, ದ್ವಿಚಕ್ರ ವಾಹನಗಳಲ್ಲಿ ಶೇ 18ರಷ್ಟು ಪ್ರಮಾಣದ ಸವಾರರು ಮಾತ್ರವೇ ಹೆಲ್ಮೆಟ್ ಧರಿಸುವುದು, ಅದರಲ್ಲೂ ಶೇ 25ರಷ್ಟು ಮಾತ್ರವೇ ಅಧಿಕೃತ ಮಾನ್ಯತೆ ಪಡೆದ ಕಂಪನಿಯ ಹೆಲ್ಮೆಟ್‌ಗಳನ್ನು ಬಳಸಲಾಗುತ್ತಿರುವುದು ಮತ್ತು ಮದ್ಯದ ಅಂಗಡಿಗಳು ಎಲ್ಲೆಂದರಲ್ಲಿ ಅತ್ಯಂತ ನಿಬಿಡವಾಗಿರುವುದೂ ಪ್ರಮುಖ ಕಾರಣ’ ಎಂದು ಗುರುರಾಜ್‌ ವ್ಯಾಖ್ಯಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.