ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಬೇಕು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅಧಿಕಾರಿಗಳ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಮುಖ್ಯ ರಸ್ತೆ, ಉಪ ಮುಖ್ಯರಸ್ತೆಗಳಿಗೆ ಮೊದಲ ಆದ್ಯತೆ ನೀಡಿ, ಮಳೆ ಆರಂಭವಾಗುವುದಕ್ಕೆ ಮುನ್ನವೇ ಎಲ್ಲ ಗುಂಡಿಗಳನ್ನು ಮುಚ್ಚಬೇಕು ಎಂದು ಆದೇಶಿಸಿದರು.
ಮಳೆಯಾಗುವ ಸಂದರ್ಭದಲ್ಲೂ ಕೋಲ್ಡ್ ಮಿಕ್ಸ್ ಬಳಸಿಕೊಂಡು ರಸ್ತೆಗುಂಡಿಗಳನ್ನು ಮುಚ್ಚಬೇಕು. ಡಾಂಬರೀಕರಣವಾಗುತ್ತಿರುವ ರಸ್ತೆಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ಕೆ.ಆರ್. ಪುರದ ಸಾಯಿ ಲೇಔಟ್ ಜಲಾವೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಈಗಾಗಲೇ ಜಾಕ್ ವೆಲ್ ನಿರ್ಮಾಣ ಮಾಡಿದ್ದು, ಅದರ ಮೂಲಕ ನೀರನ್ನು ಹೊರ ಹಾಕುವ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ ಪಾಲಿಕೆ ವತಿಯಿಂದ ಪಂಪ್ ಸೆಟ್‌ಗಳನ್ನು ಸ್ಥಳದಲ್ಲಿ ಶಾಶ್ವತವಾಗಿಟ್ಟು, ಜಲಾವೃತವಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಸಣ್ಣ ಅರಣ್ಯ: ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸಣ್ಣ ಅರಣ್ಯಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಬೇಕು. ಈ ಸಂಬಂಧ ಸ್ಥಳಗಳನ್ನು ಗುರುತಿಸಿದ ಬಳಿಕ ಸಣ್ಣ ಅರಣ್ಯ ನಿರ್ಮಾಣ ಮಾಡಲು ಸೂಕ್ತ ಕ್ರಮಗಳನ್ನು ವಹಿಸಲು ಸೂಚಿಸಿದರು.
ಕಸದ ಸಮಸ್ಯೆ, ಬೀದಿದೀಪ, ರಸ್ತೆ ಗುಂಡಿ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಸಹಾಯವಾಣಿ ಸಂಖ್ಯೆ, ವಾಟ್ಸ್ ಆ್ಯಪ್‌ಗೆ, ಸಹಾಯ 2.0ಗೆ ಬರುವ ದೂರುಗಳಿಗೆ ಸ್ಪಂದಿಸಿ ಶೀಘ್ರ ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.