ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿರುವ (ಗರುಡಪ್ಪ ಸರ್ಕಲ್ ಸಮೀಪ) ಕೈಗಾರಿಕಾ ವಸಾಹತು ಪ್ರದೇಶಗಳ ಕೆಲವು ರಸ್ತೆಗಳು ದಶಕಗಳಿಂದ ಡಾಂಬರ್ ಕಂಡಿಲ್ಲ. ಇದರಿಂದ ಇಲ್ಲಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಾಗಿದೆ.
ಸುತ್ತಲಿನ ವಸತಿ ಪ್ರದೇಶಗಳ ರಸ್ತೆಗಳೆಲ್ಲ ಡಾಂಬರು ಹೊದ್ದುಕೊಂಡಿವೆ. ಕೈಗಾರಿಕೆಗಳಿರುವ ರಸ್ತೆಗಳು ಮಾತ್ರ ಮಣ್ಣಿನ ರಸ್ತೆಗಳಾಗೇ ಉಳಿದಿವೆ. ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿ, ಹೊಂಡಗಳಿವೆ. ‘ಈ ರಸ್ತೆಗಳಲ್ಲಿ ಮತಗಳಿಲ್ಲ, ಉದ್ಯಮಗಳಷ್ಟೇ ಇವೆ. ಆ ಕಾರಣಕ್ಕೆ ಇಲ್ಲಿನ ಜನಪ್ರತಿನಿಧಿಗಳು ರಸ್ತೆಗೆ ಡಾಂಬರು ಹಾಕಿಸುತ್ತಿಲ್ಲ’ ಎಂಬುದು ಸ್ಥಳೀಯ ಕೈಗಾರಿಕೋದ್ಯಮಿಗಳ ಆರೋಪ.
ರಸ್ತೆಗಳು ಹೀಗೆ ಅಧ್ವಾನವಾಗಿರುವುದರಿಂದ ಉದ್ದಿಮೆದಾರರು ಕಚ್ಚಾ ವಸ್ತುಗಳು, ತಯಾರಿಸಿದ ಉತ್ಪನ್ನಗಳನ್ನು ಸಾಗಿಸುವುದು ಮತ್ತು ವ್ಯಾಪಾರಕ್ಕಾಗಿ ಗ್ರಾಹಕರು ಬಂದು ಹೋಗುವುದು ಕಷ್ಟವಾಗಿದೆ. ಇದು ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಕೈಗಾರಿಕೋದ್ಯಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಈ ಬಡಾವಣೆಯಲ್ಲಿ ವಸತಿ ಪ್ರದೇಶಗಳ ಜೊತೆಗೆ ಕಿಯೋನಿಕ್ಸ್ ಸೇರಿದಂತೆ ಸಣ್ಣ ಸಣ್ಣ ಕೈಗಾರಿಕಾ ವಸಾಹತುಗಳಿವೆ. ಇದರಲ್ಲಿ ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕೆಗೆಳಿರುವ ಶೀಟ್ ಮೆಟಲ್, ಪವರ್ ಪ್ರೆಸ್, ಏರೋಸ್ಪೇಸ್ ಕಂಪನಿಗಳಿಗೆ ಪೂರೈಸುವ ಸ್ಟೀಮ್ ಟರ್ಬೈನ್ ತಯಾರಿಕಾ ಘಟಕಗಳಿವೆ. ದೇಶ ವಿದೇಶಗಳ ಕಂಪನಿಗಳಿಗೆ ಇಲ್ಲಿಂದ ಪೂರಕ ಉತ್ಪನ್ನಗಳು ಮತ್ತು ಬಿಡಿ ಭಾಗಗಳು ಪೂರೈಕೆಯಾಗುತ್ತವೆ. ನೂರಾರು ಕಾರ್ಮಿಕರು ಕೆಲಸ ಮಾಡುತ್ತಾರೆ. ದೇಶ–ವಿದೇಶಗಳ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇಲ್ಲಿನ ವಸತಿ ಪ್ರದೇಶಗಳ ಹಲವು ರಸ್ತೆಗಳು ಚೆನ್ನಾಗಿವೆ. ಆದರೆ, ಕೈಗಾರಿಕೆಗಳಿರುವ ರ‍್ಯಾಪಿಡ್ ಪ್ಯಾಕ್ ರಸ್ತೆ (ಕಿಯೋನಿಕ್ಸ್ ಕೈಗಾರಿಕಾ ಪ್ರದೇಶ), ಪೀಣ್ಯ ಫೈನ್ ಕಾಂಪ್ ರಸ್ತೆ ಮತ್ತು ಇದಕ್ಕೆ ಹೊಂದಿಕೊಂಡಿರುವ ಸುತ್ತಮುತ್ತಲಿನ ರಸ್ತೆಗಳಿಗೆ ಮಾತ್ರ ಡಾಂಬರೀಕರಣ ಮಾಡಿಯೇ ಇಲ್ಲ.
‘ಇಲ್ಲಿ ಓಟ್ ಹಾಕುವವರಿಲ್ಲ, ಅದಕ್ಕೆ ರಸ್ತೆ ಅಭಿವೃದ್ಧಿ ಮಾಡಿಸಿಲ್ಲ ಎನ್ನುತ್ತಾರೆ. ಆದರೆ, ಕಾರ್ಖಾನೆಗಳಲ್ಲಿರುವ ಕಾರ್ಮಿಕರು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಹಾಕುವುದಿಲ್ಲವೆ? ಇಲ್ಲಿರುವ ಕಾರ್ಖಾನೆಗಳ ಮಾಲೀಕರು ಮತದಾನ ಮಾಡುವುದಿಲ್ಲವೆ’ ಎಂದು ಪ್ರಶ್ನಿಸುತ್ತಾರೆ.
‘ಇತ್ತೀಚೆಗೆ ಈ ಭಾಗದಲ್ಲಿ ಕೆಲ ರಸ್ತೆಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಲಾಗಿತ್ತು. ಅದರಲ್ಲಿ ಇಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕೇಳಿದೆವು. ಏನೂ ಪ್ರಯೋಜನವಾಗಲಿಲ್ಲ’ ಎಂದು ಉದ್ದಿಮೆದಾರರು ಬೇಸರದಿಂದ ಹೇಳುತ್ತಾರೆ.
‘ಈ ಮಣ್ಣಿನ ರಸ್ತೆಗಳು ಬೇಸಿಗೆಯಲ್ಲಿ ದೂಳು ಎಬ್ಬಿಸುತ್ತವೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತವೆ. ದೂಳಿನಿಂದಾಗಿ ಇಲ್ಲಿ ಕೆಲಸ ಮಾಡುವವರಿಗೆ ಆರೋಗ್ಯದಲ್ಲಿ ತೊಂದರೆಗಳಾಗಿವೆ. ಈ ರಸ್ತೆಗಳ ಅಧ್ವಾನದ ಕಾರಣದಿಂದಾಗಿ ಲಕ್ಷಾಂತರ ರೂಪಾಯಿ ಮೊತ್ತದ ವ್ಯಾಪಾರ ನಷ್ಟವಾಗಿದೆ. ಈಗಲೂ ಇಲ್ಲಿಗೆ ಗ್ರಾಹಕರು ಬರುವುದಕ್ಕೆ ಹಿಂದೇಟು ಹಾಕುತ್ತಾರೆ’ ಎಂದು ಉದ್ಯಮಿ ಅರಸ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
'ಪೀಣ್ಯ ಕೈಗಾರಿಕಾ ಪ್ರದೇಶದಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ₹ 8 ಸಾವಿರ ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗುತ್ತದೆ. ಅದರಲ್ಲಿ ಶೇ 0.1ರಷ್ಟು ಹಣ ಖರ್ಚು ಮಾಡಿದರೂ, ನಮ್ಮ ಕೈಗಾರಿಕಾ ಪ್ರದೇಶಗಳು ಸುಧಾರಿಸುತ್ತವೆ. ಈ ಬಗ್ಗೆ ಸರ್ಕಾರವನ್ನು ಕೇಳಿ ಕೇಳಿ ಸಾಕಾಗಿದೆ. ದೆಹಲಿವರೆಗೂ ಪತ್ರ ವ್ಯವಹಾರ ಮಾಡಿದ್ದಾಗಿದೆ. ಏನೂ ಪ್ರಯೋಜನವಾಗಿಲ್ಲ' ಎಂದು ಸಣ್ಣ ಕೈಗಾರಿಕೆ ಹೊಂದಿರುವ ಉದ್ಯಮಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.
‘ರಸ್ತೆ ಸಮಸ್ಯೆಯ ಕಾರಣ ಉದ್ಯಮ ನಡೆಸಲು ತೊಂದರೆಯಾಗಿದೆ. ಮೊದಲು ರಸ್ತೆಗೆ ಡಾಂಬರು ಹಾಕಿಸಬೇಕು. ಕೈಗಾರಿಕೆ ಪ್ರದೇಶಗಳಿಗೆ ಕನಿಷ್ಠ ಸೌಲಭ್ಯವನ್ನು ಕಲ್ಪಿಸಬೇಕು’ ಎಂದು ಕೇಶವಮೂರ್ತಿ ಸೇರಿದಂತೆ ಹಲವು ಉದ್ಯಮಿಗಳು ಬಿಬಿಎಂಪಿಯನ್ನು ಒತ್ತಾಯಿಸಿದರು.
‘ತಿಗಳರ ಪಾಳ್ಯ ಮುಖ್ಯ ರಸ್ತೆಯಲ್ಲಿ ಕಿಯೋನಿಕ್ಸ್ ನಂದಗೋಕುಲ ಮತ್ತು ಬಾಲಾಜಿ ಕೈಗಾರಿಕಾ ವಸಾಹತು ಪ್ರದೇಶಗಳಿವೆ. ಇಲ್ಲಿ ಸುಮಾರು ಏಳು ಸಾವಿರ ಕೈಗಾರಿಕೆಗಳಿವೆ. 18 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಅದರಲ್ಲಿ ಸುಮಾರು ಆರು ಸಾವಿರ ಮಹಿಳೆಯರಿದ್ದಾರೆ. ಇಲ್ಲಿನ ರಸ್ತೆಗಳು ಅದೆಷ್ಟೋ ವರ್ಷಗಳಿಂದ ಡಾಂಬರು ಕಂಡಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಬೀದಿ ದೀಪಗಳೂ ಇಲ್ಲ. ಸರ್ಕಾರ ರಸ್ತೆಗಳಿಗೆ ಡಾಂಬರು ಹಾಕಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು’
- ಶಿವಕುಮಾರ್ ಆರ್. ಅಧ್ಯಕ್ಷ ಪೀಣ್ಯ ಕೈಗಾರಿಕಾ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.