ಬೆಂಗಳೂರು: ಉದ್ದೇಶಪೂರ್ವಕವಾಗಿ ಅಪಘಾತವನ್ನುಂಟು ಮಾಡಿ ಸಾರ್ವ ಜನಿಕರ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಶಿವಾಜಿನಗರ ನೆಹರುಪುರದ ಮುಜುಮೀಲ್ ಹುಸೇನ್ ಅಲಿಯಾಸ್ ಚೋರ್ ಮುಜ್ಜು (27) ಹಾಗೂ ಜೆ.ಸಿ.ನಗರ ಮಾರಪ್ಪ ಗಾರ್ಡನ್‌ನ ಪೈಜ್ ಹುಸೇನ್ (25) ಬಂಧಿತರು. ಇವರಿಂದ ₹ 2.50 ಲಕ್ಷ ಮೌಲ್ಯದ ದ್ವಿಚಕ್ರ ವಾಹನ ಹಾಗೂ 11 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿಗಳು ನಿತ್ಯವೂ ಬೈಕ್‌ನಲ್ಲಿ ಸುತ್ತಾಡುತ್ತಿದ್ದರು. ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಬೈಕ್‌ಗಳಿಗೆ ಉದ್ದೇಶಪೂರ್ವಕವಾಗಿ ತಮ್ಮ ಬೈಕ್ ಗುದ್ದಿಸಿ ಅಪಘಾತವನ್ನುಂಟು ಮಾಡುತ್ತಿದ್ದರು. ತಮ್ಮ ಬೈಕ್ ಜಖಂಗೊಂಡಿರುವುದಾಗಿ ಹೇಳಿ, ಜಗಳ ತೆಗೆಯುತ್ತಿದ್ದರು. ನಂತರ, ಚಾಕು ತೋರಿಸಿ ಬೆದರಿಸಿ ನಗದು ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು’ ಎಂದು ತಿಳಿಸಿದರು.
‘ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರನ್ನೂ ಬೆದರಿಸಿ ಆರೋಪಿಗಳು ಸುಲಿಗೆ ಮಾಡುತ್ತಿದ್ದರು. ಈ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿದ್ದವು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.