ADVERTISEMENT

ವೃದ್ಧೆಯ ಕೈ– ಕಾಲು ಕಟ್ಟಿ ಹಾಕಿ ದರೋಡೆ

ಬಾಡಿಗೆ ಕೇಳುವ ನೆಪದಲ್ಲಿ ಕೃತ್ಯವೆಸಗಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 19:41 IST
Last Updated 23 ಫೆಬ್ರುವರಿ 2022, 19:41 IST
ಜಪ್ತಿ ಮಾಡಲಾದ ಚಿನ್ನಾಭರಣ
ಜಪ್ತಿ ಮಾಡಲಾದ ಚಿನ್ನಾಭರಣ   

ಬೆಂಗಳೂರು: ಬಾಡಿಗೆ ಕೇಳುವ ನೆಪದಲ್ಲಿ ಮನೆಯೊಂದಕ್ಕೆ ನುಗ್ಗಿ ವೃದ್ಧೆಯ ಕೈ–ಕಾಲು ಕಟ್ಟಿಹಾಕಿ ದರೋಡೆ ಮಾಡಿದ್ದ ಆರೋಪಿ ಕಿರಣ್‌ಕುಮಾರ್ ಎಂಬಾತನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

'ಉಳ್ಳಾಲದ ಶಾಂತಮ್ಮ (71) ಎಂಬುವರ ಮನೆಯಲ್ಲಿ ಫೆ. 7ರಂದು ದರೋಡೆ ನಡೆದಿತ್ತು. ತನಿಖೆ ಕೈಗೊಂಡು ಆರೋಪಿ ಕಿರಣ್‌ಕುಮಾರ್‌ನನ್ನು ಬಂಧಿಸಲಾಗಿದೆ. ಆತನಿಂದ ₹ 9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಶಾಂತಮ್ಮ, ಪತಿ ಸತ್ಯನಾರಾಯಣ ಜೊತೆ ಉಲ್ಲಾಳದಲ್ಲಿ ವಾಸವಿದ್ದರು. ಪತಿ ಸಹ ನಿವೃತ್ತ ಅಧಿಕಾರಿ. ನಿವೃತ್ತಿ ವೇಳೆ ಬಂದಿದ್ದ ಹಣದಲ್ಲಿ ದಂಪತಿ, ಆಭರಣ ಖರೀದಿಸಿಟ್ಟುಕೊಂಡಿದ್ದರು. ಅವರ ಮಕ್ಕಳಿಬ್ಬರು ಬೇರೆ ಕಡೆ ವಾಸವಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

‘ಸತ್ಯನಾರಾಯಣ ಅವರು ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಶಾಂತಮ್ಮ ಮಾತ್ರ ಮನೆಯಲ್ಲಿದ್ದರು. ಅದನ್ನು ತಿಳಿದುಕೊಂಡು ಆರೋಪಿ ಕೃತ್ಯ ಎಸಗಿದ್ದ.’

‘ಶಾಂತಮ್ಮ ಅವರಿಗೆ ಸೇರಿದ್ದ ಮನೆಯೊಂದು ಖಾಲಿ ಇದೆ. ಅದರ ಎದುರು ‘ಬಾಡಿಗೆಗೆ ಮನೆ ಇದೆ’ ಎಂಬ ಫಲಕ ನೇತು ಹಾಕಲಾಗಿದೆ. ಅದನ್ನು ನೋಡಿದ್ದ ಆರೋಪಿ, ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ್ದ. ಶಾಂತಮ್ಮ ಅವರ ಕೈ–ಕಾಲು ಕಟ್ಟಿ ಹಾಕಿ ಹಲ್ಲೆ ಮಾಡಿದ್ದ. ಮನೆಯಲ್ಲಿ ಹುಡುಕಾಡಿ, ಚಿನ್ನಾಭರಣ ದೋಚಿಕೊಂಡು ಹೋಗಿದ್ದ’ ಎಂದೂ ಹೇಳಿದರು.

ರೇಖಾಚಿತ್ರದಿಂದ ಸುಳಿವು: ‘ಕೃತ್ಯದ ಬಗ್ಗೆ ದೂರು ನೀಡಿದ್ದ ಶಾಂತಮ್ಮ, ಆರೋಪಿ ಮುಖ ಚಹರೆ ಹೇಗಿದೆ ಎಂಬುದನ್ನು ವಿವರಿಸಿದರು. ಅದನ್ನು ಆಧರಿಸಿ ರೇಖಾಚಿತ್ರ ಸಿದ್ಧಪಡಿಸಿ, ವಿವಿಧ ಠಾಣೆಗಳಿಗೆ ಕಳುಹಿಸಲಾಗಿತ್ತು. ಅದರ ಮೂಲಕ ಸಿಕ್ಕ ಸುಳಿವು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.