ADVERTISEMENT

ದರೋಡೆ; ದೂರು ನೀಡಿದ್ದವನೇ ಆರೋಪಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 21:19 IST
Last Updated 19 ನವೆಂಬರ್ 2020, 21:19 IST

ಬೆಂಗಳೂರು: ಭಾರತಿನಗರ ಠಾಣೆ ವ್ಯಾಪ್ತಿಯಲ್ಲಿರುವ ‘ಎ.ಕೆ.ಝೆಡ್ ಸೀ ‍‍ಪುಡ್’ ಅಂಗಡಿಯಲ್ಲಿ ಸಂಗ್ರಹವಾಗಿದ್ದ ಹಣ ದರೋಡೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

‘ಸಯ್ಯದ್ ಸುಹೇಲ್ (25), ಸಾಹೀಲ್ ಅಹಮ್ಮದ್ ಖಾನ್ ಅಲಿಯಾದ್ ಫಹಾದ್ (25), ಸಯ್ಯದ್ ಜವಾದ್ (20), ಮಹಮ್ಮದ್ ಸಾಲ್ಹೆ (20), ಮಹಮ್ಮದ್ ಶಾಬಾಜ್ (24) ಹಾಗೂ ಸಯ್ಯದ್ ರವೂಫ್ (19) ಬಂಧಿತರು. ಅವರಿಂದ ₹5.83 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಪ್ರಮುಖ ಆರೋಪಿ ಸಯ್ಯದ್ ಸುಹೇಲ್, ಅಂಗಡಿಯಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ. ನಿತ್ಯವೂ ಅಂಗಡಿಯಲ್ಲಿ ಸಂಗ್ರಹವಾಗುತ್ತಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಆತನೇ ಮಾಲೀಕರ ಮನೆಗೆ ಹೋಗಿ ತಲುಪಿಸುತ್ತಿದ್ದ’ ಎಂದೂ ತಿಳಿಸಿದರು.

ADVERTISEMENT

‘ಅಪರಾಧ ಹಿನ್ನೆಲೆಯುಳ್ಳ ಮೊಹಮ್ಮದ್ ಸಾಲ್ಹೆ ಎಂಬಾತನನ್ನು ಸಂಪರ್ಕಿಸಿದ್ದ ಸುಹೇಲ್, ಅಂಗಡಿಯಲ್ಲಿ ಸಂಗ್ರಹವಾಗುವ ಹಣವನ್ನು ದರೋಡೆ ಮಾಡಿ ಪರಸ್ಪರ ಹಂಚಿಕೊಳ್ಳೋಣವೆಂದು ಹೇಳಿದ್ದ. ಅದಕ್ಕೆ ಒಪ್ಪಿದ್ದ ಸಾಲ್ಹೆ, ತನ್ನ ಸಹಚರರ ಜೊತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ.’

‘ನ. 9ರಂದು ರಾತ್ರಿ ಅಂಗಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಸುಹೇಲ್, ದ್ವಿಚಕ್ರ ವಾಹನದಲ್ಲಿ ಇಟ್ಟುಕೊಂಡು ಇನ್ನೊಬ್ಬ ಕೆಲಸಗಾರನ ಜೊತೆ ಮಾಲೀಕರ ಮನೆಯತ್ತ ಹೊರಟಿದ್ದ. ಎರಡು ಬೈಕ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಚಾಕು ತೋರಿಸಿ ಬೆದರಿಸಿ ಹಣ ದರೋಡೆ ಮಾಡಿದ್ದರು. ಸುಹೇಲ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.’

‘ಠಾಣೆಗೆ ಬಂದಿದ್ದ ಸುಹೇಲ್, ದರೋಡೆ ಬಗ್ಗೆ ದೂರು ನೀಡಿದ್ದ. ತನಿಖೆ ಕೈಗೊಂಡಾಗ ಆತನೇ ದರೋಡೆ ಮಾಡಿಸಿದ್ದು ಎಂಬುದು ತಿಳಿಯಿತು. ಬಳಿಕ ಉಳಿದೆಲ್ಲ ಆರೋಪಿಗಳನ್ನು ಬಂಧಿಸಲಾಯಿತು’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.