ADVERTISEMENT

ಜಿಎಸ್‌ಟಿ ಹೆಸರಿನಲ್ಲಿ ಬಡವರನ್ನು ದೋಚುತ್ತಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 19:01 IST
Last Updated 18 ಜುಲೈ 2022, 19:01 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಕೇಂದ್ರ ಸರ್ಕಾರವು ಜಿಎಸ್‌ಟಿ ಹೆಸರಿನಲ್ಲಿ ಬಡವರನ್ನು ದೋಚುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಆರೋಪಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಪೆಟ್ರೋಲಿಯಂ ಉತ್ಪನ್ನಗಳು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈಗ ಅಗತ್ಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸಿ ಬಡವರ ಅನ್ನವನ್ನೂ ಕಿತ್ತುಕೊಳ್ಳುತ್ತಿದ್ದಾರೆ. ತೆರಿಗೆ ಹೆಸರಿನಲ್ಲಿ ಜನರನ್ನು ಲೂಟಿ ಮಾಡುವುದಕ್ಕೂ ಒಂದು ಮಿತಿ ಬೇಡವೆ’ ಎಂದು ಪ್ರಶ್ನಿಸಿದರು.

‘ಒಂದು ಕಡೆ ತೆರಿಗೆ ಹೆಚ್ಚಿಸುತ್ತಿದ್ದಾರೆ. ಇನ್ನೊಂದು ಕಡೆ ಉಚಿತ ಯೋಜನೆಗಳು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ದೇಶದಲ್ಲಿ ಬಡತನ ಹೆಚ್ಚುತ್ತಿದೆ. ತಿನ್ನಲು ಆಹಾರವಿಲ್ಲದೆ ಜನರು ಸಾಯುತ್ತಿದ್ದಾರೆ. ಶ್ರೀಲಂಕಾಕ್ಕಿಂತ ಭಿನ್ನವಾದ ಪರಿಸ್ಥಿತಿ ದೇಶದಲ್ಲಿಲ್ಲ. ಬಡವರ ಮನೆಗಳಲ್ಲಿ ಎರಡು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ’ ಎಂದರು.

ADVERTISEMENT

ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ವಿದೇಶಿ ವಿನಿಮಯ ಸಂಗ್ರಹವೂ ತಗ್ಗುತ್ತಿದೆ. ಕೇಂದ್ರ ಸರ್ಕಾರದ ನೀತಿಯಿಂದಾಗಿ ವಿದೇಶಿ ಕಂಪನಿಗಳು ಹೂಡಿಕೆ ಹಿಂಪಡೆಯುತ್ತಿವೆ. ಈ ಬಗ್ಗೆಯೂ ಚರ್ಚೆಯಾಗಲಿ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.