ADVERTISEMENT

ರೋಲ್‌ ಮಾಡೆಲ್‌ ಪರಿಕಲ್ಪನೆ ನಮ್ಮದಲ್ಲ: ಜಗ್ಗಿ ವಾಸುದೇವ್‌

ಐಐಎಂ ವಿದ್ಯಾರ್ಥಿಗಳೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2018, 18:59 IST
Last Updated 16 ಸೆಪ್ಟೆಂಬರ್ 2018, 18:59 IST
ಐಐಎಂ ವಿದ್ಯಾರ್ಥಿಗಳ ಜತೆ ಜಗ್ಗಿ ವಾಸುದೇವ್‌ ಸಂವಾದ ನಡೆಸಿದರು
ಐಐಎಂ ವಿದ್ಯಾರ್ಥಿಗಳ ಜತೆ ಜಗ್ಗಿ ವಾಸುದೇವ್‌ ಸಂವಾದ ನಡೆಸಿದರು   

ಬೆಂಗಳೂರು: ‘ಮಾದರಿ ವ್ಯಕ್ತಿಗಳನ್ನು (ರೋಲ್‌ ಮಾಡೆಲ್‌) ಅನುಸರಿಸುವುದೆಂದರೆ ಮಾವಿನ ಮರವೊಂದು ತೆಂಗಿನ ಮರವಾಗಲು ಪ್ರಯತ್ನಪಟ್ಟಂತೆ...’

ಇದು ಈಶ ಫೌಂಡೇಷನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಅವರ ಮಾರ್ಮಿಕ ಉತ್ತರ.

ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಗಳೊಂದಿಗೆ ಭಾನುವಾರ ಅವರು ಸಂವಾದ ನಡೆಸಿದರು. ವಾರ್ಷಿಕ ಅಂತರರಾಷ್ಟ್ರೀಯ ವ್ಯವಹಾರ ಸಮ್ಮೇಳನದಲ್ಲಿ ‘ಯೂತ್‌ ಆ್ಯಂಡ್‌ ಟ್ರುಥ್‌’ ವಿಷಯದ ಮೇಲೆ ಸಂವಾದ ನಡೆಯಿತು. ಅದರ ಝಲಕ್‌ ಹೀಗಿದೆ.

ADVERTISEMENT

ರೋಲ್‌ ಮಾಡೆಲ್‌ಗಳ ಬಗ್ಗೆ ಕೇಳಲಾದ ಪ್ರಶ್ನೆಗೆ, ‘ನಾನು ಯಾವುದೇ ಮಾಡೆಲ್‌ ಜತೆ ರೋಲ್‌ (ಉರುಳಾಡು) ಆಗುವುದಿಲ್ಲ’ ಎಂದು ಲಘುವಾಗಿ ನುಡಿದರು. ಇಡೀ ಸಭಾಂಗಣ ನಗೆಗಡಲಲ್ಲಿ ತೇಲಿತು.

‘ನಮ್ಮ ಸಂಸ್ಕೃತಿಯಲ್ಲಿ ರೋಲ್‌ ಮಾಡೆಲ್‌ ಎಂಬ ಪರಿಕಲ್ಪನೆಯೇ ಇಲ್ಲ. ಇದೆಲ್ಲಾ ಪಾಶ್ಚಾತ್ಯರಿಂದ ಆಮದಾದ ಕಲ್ಪನೆಗಳು. ಒಳ್ಳೆಯ ವಿಚಾರಗಳು ನಮ್ಮೊಳಗೇ ಉದ್ಭವಿಸಬೇಕು’ ಎಂದರು.

ಸರಿಯಾದ ಜೀವನ ಸಂಗಾತಿಯ ಆಯ್ಕೆ ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸದ್ಗುರು, ‘ಆತ್ಮಸಂಗಾತಿಯನ್ನು ಪರಸ್ಪರ ಬೆಸೆಯುವ ವ್ಯವಹಾರ ಬಂದಿದ್ದು ಅಮೆರಿಕದಿಂದ. ಆದರೆ, ದೇವರು ಒಬ್ಬ ಸಂಗಾತಿಯನ್ನು ನಿಮಗಾಗಿ ಸೃಷ್ಟಿಸಿರುತ್ತಾನೆ. ಆದರೆ, ಇಂದಿನ ದಿನಗಳಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಒಬ್ಬೊಬ್ಬ ಹೆಚ್ಚುವರಿ ‘ಸಂಗಾತಿ’ಯನ್ನು ಸೃಷ್ಟಿಸುತ್ತಲೇ ಇರುತ್ತಾನೆ’ ಎಂದು ಬದಲಾದ ಕಾಲ, ಪರಿಸ್ಥಿತಿಯನ್ನು ವಿವರಿಸಿದರು.

ನಿರುದ್ಯೋಗ ಸಮಸ್ಯೆಯ ಆತಂಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಇಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಇಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಲೇಬಾರದು. ಆದರೆ, ನಾವು ಇಲ್ಲಿ ನಿರ್ದಿಷ್ಟ ಸ್ವರೂಪದ ಉದ್ಯೋಗವನ್ನೇ ಬಯಸುತ್ತಿದ್ದೇವೆ. ಹಾಗಾಗಿ ನಿರುದ್ಯೋಗವಿದೆ ಅನಿಸುತ್ತದೆ. ಯುವಜನರು ದೇಶದ ಹಲವು ಸಮಸ್ಯೆಗಳನ್ನು ಬಗೆಹರಿಸಲು, ಅಗತ್ಯಗಳನ್ನು ಪೂರೈಸಲು ಶಿಕ್ಷಣವನ್ನು ಬಳಸಬೇಕು. ಕೆಲಸ ಮಾಡುವ ಮಿದುಳು, ನೋಡುವ ಕಣ್ಣುಗಳಿದ್ದರೆ ಸಾವಿರಾರು ವಿಷಯಗಳು ಇಲ್ಲಿ ಸಿಗುತ್ತವೆ’ ಎಂದು ಹೇಳಿದರು.

‘ನೀವು ಉದ್ಯಮ ಮಾಡುತ್ತೀರಾದರೆ ಪ್ರಪಂಚ ನಿಮ್ಮನ್ನು ತಡೆಯುತ್ತದೆಯೇ? ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಸಾಧ್ಯತೆಯೂ ಇರುತ್ತದೆ’ ಎಂದು ಅವರು ಹೇಳಿದರು.

‘ಯುವಜನರು ತಮ್ಮ ಜೀವನದಲ್ಲಿ ಗುರಿಗಿಂತಲೂ ಒಳ್ಳೆಯ ಆಶಯಗಳನ್ನು ಹೊಂದಿರಬೇಕು. ಅವು ಕ್ರಿಯೆಗೆ ಬಂದಾಗ ಮುಂದೇನಾಗಬೇಕು ಎಂಬುದನ್ನು ಪ್ರಪಂಚ ನಿರ್ಧರಿಸುತ್ತದೆ. ನೀವು ಈ ಜೀವನವನ್ನು ಎಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೀರಿ? ಅದು ನಿಜವಾಗಿಯೂ ಮೌಲ್ಯಯುತವಾದದ್ದೇ? ಎಂಬುದನ್ನು ಆಲೋಚಿಸಿ. ಪೂರ್ಣ ಪ್ರಮಾಣದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಖಂಡಿತವಾಗಿಯೂ ಒಳ್ಳೆಯ ಕೆಲಸ ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.