ADVERTISEMENT

ಆರೋಪಿ ಕಾಲಿಗೆ ಗುಂಡೇಟು

ಭಟ್ಟಿ ಅಮ್ಜದ್‌ ಕೊಲೆ ಪ್ರಕರಣ ಪ್ರಮುಖ ಆರೋಪಿ ಯೂನಸ್‌ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 18:45 IST
Last Updated 3 ಮಾರ್ಚ್ 2020, 18:45 IST

ಬೆಂಗಳೂರು: ಫೆ. 29ರಂದು ರಾತ್ರಿ ಡಿ.ಜೆ. ಹಳ್ಳಿಯಲ್ಲಿ ಮರದ ವ್ಯಾಪಾರಿ ಭಟ್ಟಿ ಅಮ್ಜದ್‌ ಎಂಬವರನ್ನು ಬರ್ಬರವಾಗಿ ಕೊಲೆ ಮಾಡಿದ್ದ ತಂಡದ ಪ್ರಮುಖ ಆರೋಪಿಯನ್ನು ಮಂಗಳವಾರ ಬೆಳಿಗ್ಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಗುಂಡೇಟಿನಿಂದ ಎಡಕಾಲಿಗೆ ಗಾಯಗೊಂಡಿರುವ ಪಿಳ್ಳಣ್ಣ ಗಾರ್ಡನ್‌ ನಿವಾಸಿ ಯೂನಸ್ (28) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

‘ಡಿ.ಜಿ. ಹಳ್ಳಿಯ ಚರ್ಮದ ಮಂಡಿ ಬಳಿ ಶಿವರಾಜ್‌ ಸ್ಟ್ರೀಟ್‌ನ ಭಟ್ಟಿ ಅಮ್ಜದ್‌ ಅವರನ್ನು 11 ಮಂದಿಯ ತಂಡ ಲಾಂಗು, ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಈ ಕೃತ್ಯದ ಹಿಂದೆ ಯೂನಸ್‌ ನೇತೃತ್ವದ ಗುಂಪಿನ ಕೈವಾಡ ಪತ್ತೆಯಾಗಿತ್ತು. ಅಲ್ಲದೆ, ಕೊಲೆಗೆ ಸಂಚು ರೂಪಿಸಿ, ಹಲ್ಲೆ ನಡೆಸಿರುವುದು ಗೊತ್ತಾ ಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ. ಶರಣಪ್ಪ ತಿಳಿಸಿದರು.

ADVERTISEMENT

ಮಂಗಳವಾರ ಬೆಳಿಗ್ಗೆ 6.30ರ ಸುಮಾರಿಗೆ ಕೃತ್ಯ ನಡೆದ ಚರ್ಮದ ಮಂಡಿ ಬಳಿಗೆ ಯೂನಸ್‌ನನ್ನು ಪೊಲೀ ಸರು ಕರೆದೊಯ್ದಿದ್ದರು. ಸ್ಥಳ ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ಆರೋಪಿ ಪರಾರಿಯಾಗಲು ಯತ್ನಿಸಿದ್ದ.

‘ಡಿ.ಜಿ ಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಕೇಶವಮೂರ್ತಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಶರಣಾಗುವಂತೆ ಆರೋಪಿಗೆ ಸೂಚಿಸಿದ್ದರು. ಆದರೆ, ಅದನ್ನು ಯೂನಸ್‌ ಲೆಕ್ಕಿಸದೇ ಇದ್ದಾಗ ಅವರು ಗುಂಡು ಹೊಡೆದಿದ್ದಾರೆ. ಕಾಲಿಗೆ ಗುಂಡು ತಗಲಿ ಕುಸಿದುಬಿದ್ದ ಯೂನಸ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗಾಯಗೊಂಡ ಪೊಲೀಸ್‌ ಕಾನ್‌ಸ್ಟೆಬಲ್‌ಗೂ ಚಿಕಿತ್ಸೆ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಭಟ್ಟಿ ಅಮ್ಚಾದ್ ಮತ್ತು ಯೂನಿಸ್ ಗುಂಪಿನ ನಡುವೆ ಹಳೇ ದ್ವೇಷದ ಕಾರಣ ಆಗಾಗ ಹೊಡೆದಾಟಗಳು ನಡೆಯುತ್ತಿದ್ದವು. ಯೂನಸ್‌ನ ಬಾವ ಇದ್ರೀಸ್‌ನನ್ನು 2010ರಲ್ಲಿ ಕೊಲೆ ಮಾಡಲಾಗಿತ್ತು. ಅದರಲ್ಲಿ ಭಟ್ಟಿ ಅಮ್ಜದ್‌ ಪ್ರಮುಖ ಪಾತ್ರ ವಹಿಸಿದ್ದರು. ಅದೇ ದ್ವೇಷದ ಮೇಲೆ ತಂಡ ರಚಿಸಿಕೊಂಡು ಕೊಲೆ ಮಾಡಿರುವುದಾಗಿ ಯೂನಸ್‌ ತಪ್ಪೊಪ್ಪಿಕೊಂಡಿದ್ದಾನೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.