ADVERTISEMENT

ಜೈಲಿನಲ್ಲಿ ಸಂಚು; ಬ್ಯಾಂಕ್‌ನಲ್ಲಿ ಕೊಚ್ಚಿ ಕೊಂದರು

* ರೌಡಿ ಬಬ್ಲಿ ಹತ್ಯೆ ಪ್ರಕರಣ; ಇಬ್ಬರ ಬಂಧನ, ಏಳು ಮಂದಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 20:22 IST
Last Updated 22 ಜುಲೈ 2021, 20:22 IST
ರೌಡಿ ಬಬ್ಲಿ
ರೌಡಿ ಬಬ್ಲಿ   

ಬೆಂಗಳೂರು: ಕೋರಮಂಗಲದ ಬ್ಯಾಂಕೊಂದರಲ್ಲಿ ನಡೆದಿದ್ದ ರೌಡಿ ಜೋಸೆಫ್ ಅಲಿಯಾಸ್ ಬಬ್ಲಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಕಾಲಿಗೆ ಗುಂಡು ಹಾರಿಸಿ ಸೆರೆಹಿಡಿದಿರುವ ಪೊಲೀಸರು, ಇದೀಗ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತ್ನಿ ಹಾಗೂ ಮಗಳ ಜೊತೆಯಲ್ಲಿ ಜುಲೈ 19ರಂದು ಬ್ಯಾಂಕ್‌ಗೆ ಬಂದಿದ್ದ ಬಬ್ಲಿಯನ್ನು ಹಾಡಹಗಲೇ ರಸ್ತೆಯಲ್ಲಿ ಅಟ್ಟಾಡಿಸಿ ಬ್ಯಾಂಕ್‌ನೊಳಗೆ ನುಗ್ಗಿ ಕೊಲೆ ಮಾಡಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, 24 ಗಂಟೆಯೊಳಗೆ ಆರೋಪಿಗಳ ಸುಳಿವು ಪತ್ತೆ ಹಚ್ಚಿದ್ದರು.

ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಪ್ರದೀಪ್ ಅಲಿಯಾಸ್ ಚೋಟೆ ಹಾಗೂ ರವಿ, ಬೇಗೂರು ಕೆರೆ ಬಳಿ ಬುಧವಾರ ಬೆಳಿಗ್ಗೆ ಕಾಣಿಸಿಕೊಂಡಿದ್ದರು. ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಅವರಿಬ್ಬರ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಸೆರೆ ಹಿಡಿದಿದ್ದರು. ಅವರಿಬ್ಬರ ವಿಚಾರಣೆಯಿಂದ ಹಲವು ಮಾಹಿತಿಗಳು ಹೊರಬಿದ್ದಿದ್ದು, ಅದನ್ನು ಆಧರಿಸಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇವರೆಲ್ಲ ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರು.

ADVERTISEMENT

ಜೈಲಿನಲ್ಲೇ ಸಂಚು: ‘ಆಡುಗೋಡಿ ಠಾಣೆ ರೌಡಿಪಟ್ಟಿಯಲ್ಲಿ ಬಬ್ಲಿ ಹೆಸರಿತ್ತು. ತನ್ನದೇ ಕಚೇರಿ ಮಾಡಿಕೊಂಡು ಸಣ್ಣಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ. ರೌಡಿ ಶಿವು ಎಂಬಾತನ ಮೇಲೆ ಈ ಹಿಂದೆ ದಾಳಿ ಮಾಡಿದ್ದ. ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಶಿವು, ಬಬ್ಲಿ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಜೈಲಿನಲ್ಲೇ ಸಂಚು ರೂಪಿಸಿದ್ದ ಆತ, ತನ್ನ ಸಹಚರರ ಮೂಲಕ ಹತ್ಯೆ ಮಾಡಿಸಿದ್ದಾನೆಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರೌಡಿ ಶಿವುನನ್ನು ಜೈಲಿನಲ್ಲಿ ವಿಚಾರಣೆ ನಡೆಸಲಾಗಿದೆ. ಆತನ ಸಹಚರರನ್ನು ವಶಕ್ಕೆ ಪಡೆಯಲಾಗಿದೆ’ ಎಂದೂ ತಿಳಿಸಿವೆ.

ಮಾರಕಾಸ್ತ್ರ ಹಿಡಿದು ಸಂಭ್ರಮ: ಬಬ್ಲಿ ಹತ್ಯೆ ನಂತರ ಆರೋಪಿಗಳು ಮಾರಕಾಸ್ತ್ರಗಳನ್ನು ಎತ್ತಿ ಹಿಡಿದು ಸಂಭ್ರಮಿಸಿದ್ದ ದೃಶ್ಯಗಳು ಬ್ಯಾಂಕ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಬೈಕ್‌ನಲ್ಲಿ ಬ್ಯಾಂಕ್‌ ಎದುರು ಬಂದಿದ್ದ ಬಬ್ಲಿ, ಪತ್ನಿಯನ್ನು ಬ್ಯಾಂಕ್‌ನೊಳಗೆ ಕಳುಹಿಸಿದ್ದ. ಆತ ಮಗಳ ಜೊತೆ ಬೈಕ್‌ ಮೇಲೆ ಕುಳಿತಿದ್ದ. ಅದೇ ಸಂದರ್ಭದಲ್ಲೇ ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರೋಪಿಗಳು, ಆತನ ಮೇಲೆ ಮಾರಕಾಸ್ತ್ರ ಬೀಸಿದ್ದರು. ತಪ್ಪಿಸಿಕೊಂಡು ಓಡಾಡಿದ್ದ ಬಬ್ಲಿ, ಬ್ಯಾಂಕ್‌ನೊಳಗೆ ಹೋಗಿದ್ದ. ಪತ್ನಿಯೂ ರಕ್ಷಣೆಗೆ ಹೋಗಿದ್ದರು. ಮಗಳು ಸಹ ಅತ್ತಿದ್ದ ಓಡಾಡಿದ್ದಳು. ಬ್ಯಾಂಕ್‌ನೊಳಗೆ ನುಗ್ಗಿದ್ದ ಆರೋಪಿಗಳು, ಅಲ್ಲಿಯೇ ಬಬ್ಲಿಯನ್ನು ಕೊಚ್ಚಿ ಕೊಂದಿದ್ದಾರೆ. ನಂತರ, ಮಾರಕಾಸ್ತ್ರ ಹಿಡಿದುಕೊಂಡು ಸಂಭ್ರಮಿಸುತ್ತಲೇ ಬ್ಯಾಂಕ್‌ನಿಂದ ಹೊರಗೆ ಬಂದು ಹೊರಟು ಹೋಗಿದ್ದಾರೆ. ರಸ್ತೆಯಲ್ಲೂ ಮಾರಕಾಸ್ತ್ರ ತೋರಿಸಿ ಆರೋಪಿಗಳು ಸಂಭ್ರಮಿಸಿದ್ದಾರೆ. ಈ ದೃಶ್ಯ ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.