ADVERTISEMENT

ರೌಡಿ ಅನೀಸ್‌ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 16:36 IST
Last Updated 5 ಆಗಸ್ಟ್ 2020, 16:36 IST

ಬೆಂಗಳೂರು: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಎರಡು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ರೌಡಿ ಅನೀಸ್ ಅಹ್ಮದ್‌ (32) ಎಂಬಾತನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬುಧವಾರ ಸೆರೆ ಹಿಡಿದಿದ್ದಾರೆ.

‘ಕೊಲೆ, ಕೊಲೆ ಯತ್ನ, ಸುಲಿಗೆ, ಅತ್ಯಾಚಾರ ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ ಅನೀಸ್, ತಲೆಮರೆಸಿಕೊಂಡು ಓಡಾಡುತ್ತಿದ್ದ. ಎರಡು ವರ್ಷಗಳಿಂದ ಆತನಿಗಾಗಿ ಹುಡುಕಾಡುತ್ತಿದ್ದೆವು’ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿದರು.

‘ಕೆ.ಜಿ. ಹಳ್ಳಿ ಠಾಣಾ ವ್ಯಾಪ್ತಿಯ ಅರೇಬಿಕಾ ಕಾಲೇಜು ಬಳಿ ಬುಧವಾರ ಬೆಳಿಗ್ಗೆ ರೌಡಿ ಅನೀಸ್ ಇರುವ ಮಾಹಿತಿ ಸಿಕ್ಕಿತ್ತು. ಇನ್‌ಸ್ಪೆಕ್ಟರ್ ಅಜಯ್ ಸಾರಥಿ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ಶರಣಾಗುವಂತೆ ಅನೀಸ್‌ಗೆ ಸಿಬ್ಬಂದಿ ಕೋರಿದ್ದರು’

ADVERTISEMENT

‘ಶರಣಾಗಲು ಒಪ್ಪದ ಆತ, ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ. ಪೊಲೀಸರು ಗಾಯಗೊಂಡರು. ಆಗ ಇನ್‌ಸ್ಪೆಕ್ಟರ್ ಆತ್ಮರಕ್ಷಣೆಗಾಗಿ ಒಂದು ಸುತ್ತು ಗುಂಡು ಹಾರಿಸಿದರು. ರೌಡಿಯ ಕಾಲಿಗೆ ಗುಂಡು ತಗುಲಿ ಸ್ಥಳದಲ್ಲಿ ಕುಸಿದು ಬಿದ್ದಿದ್ದ. ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ಅವರು ತಿಳಿಸಿದರು.

‘ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಹಾಗೂ ಕೊರೊನಾ ಪರೀಕ್ಷೆ ಮಾಡಿಸಿದ ಬಳಿಕ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.