ADVERTISEMENT

ಹಳೇ ದ್ವೇಷದ ಕಾರಣಕ್ಕೆ ರೌಡಿ ಸೈಯದ್‌ ಕೊಲೆ: ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 15:50 IST
Last Updated 14 ಜನವರಿ 2026, 15:50 IST
ಸೈಯದ್‌ ಶಬ್ಬೀರ್
ಸೈಯದ್‌ ಶಬ್ಬೀರ್   

ಬೆಂಗಳೂರು: ಹಳೇ ದ್ವೇಷದ ಕಾರಣಕ್ಕೆ ರೌಡಿ ಸೈಯದ್‌ ಶಬ್ಬೀರ್ (30) ಅವರನ್ನು ದುಷ್ಕರ್ಮಿಗಳ ತಂಡವು ಬಂಡೇಪಾಳ್ಯ ಬಳಿಯ ಮಂಗಮ್ಮನಪಾಳ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದೆ. 

ಸೈಯದ್‌ ಶಬ್ಬೀರ್ ಅವರು ಗುಜರಿ ವ್ಯಾಪಾರ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಪೊಲೀಸರು ಹೇಳಿದರು.

ADVERTISEMENT

ಸೈಯದ್ ಅವರಿಗೆ ಅಪರಾಧ ಹಿನ್ನೆಲೆ ಇತ್ತು. ಅವರ ವಿರುದ್ಧ ಕೋರಮಂಗಲ, ಪರಪ್ಪನ ಅಗ್ರಹಾರ, ಕೋಣನಕುಂಟೆ, ಬಂಡೇಪಾಳ್ಯ ಹಾಗೂ ಆಗುಂಬೆ, ಸಾಗರ, ಹಿರೀಸಾವೆ, ಚನ್ನರಾಯಪಟ್ಟಣ ಸೇರಿದಂತೆ ಹಲವು ಠಾಣೆಗಳಲ್ಲಿ 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಕೋರಮಂಗಲ ಠಾಣೆಯ ರೌಡಿಪಟ್ಟಿಯಲ್ಲಿ ಹೆಸರಿತ್ತು ಎಂದು ಪೊಲೀಸರು ಹೇಳಿದರು.

ಶಬ್ಬೀರ್ ಅವರು ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಆಟೊದಲ್ಲಿ ಮಂಗಮ್ಮನಪಾಳ್ಯಕ್ಕೆ ತೆರಳುತ್ತಿದ್ದರು. ಆಗ ದುಷ್ಕರ್ಮಿಗಳ ತಂಡವು ಆಟೊ ಅಡ್ಡಗಟ್ಟಿ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ ಎಂದು ಪೊಲೀಸರು ಹೇಳಿದರು.

ಕೆಲವು ತಿಂಗಳ ಹಿಂದೆ ಸೊಹೇಲ್ ಎಂಬುವವರ ಮೇಲೆ ಶಬ್ಬೀರ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಲ್ಲಿ ಸೊಹೇಲ್‍ ಅವರ ಕೈ ಬೆರಳುಗಳು ತುಂಡಾಗಿದ್ದವು. ಇದಕ್ಕೆ ಪ್ರತೀಕಾರವಾಗಿ ಸೊಹೇಲ್, ತನ್ನ ಸಹಚರರ ಜತೆಗೆ ಸೇರಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ.

ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಸೈಯದ್‌ ಅವರ ತಂದೆ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ (ಕೆಎಸ್‍ಆರ್‌ಪಿ) ಸಹಾಯಕ ಸಬ್ ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.