ಬೆಂಗಳೂರು: ಇಲ್ಲಿನ ಇಂದಿರಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 100 ಅಡಿ ರಸ್ತೆಯಲ್ಲಿ ನಾಲ್ವರಿಗೆ ಚಾಕು ಇರಿದು, ಪರಾರಿಯಾಗಿದ್ದ ರೌಡಿ ಕದಂಬ ಹಾಗೂ ಆತನಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಕುಟುಂಬದ ಮೂವರನ್ನು ಇಂದಿರಾನಗರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು. ಹೊಸಕೋಟೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು. ತಲೆಮರೆಸಿಕೊಳ್ಳಲು ನೆರವು ನೀಡಿದ್ದ ಆತನ ತಂದೆ ಸುರೇಶ್, ಸಹೋದರ ವಿಷ್ಣು ಹಾಗೂ ಅಕ್ಕ ಸುಶ್ಮಿತಾ ಅವರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಬಂಧಿತರು ಭಿನ್ನಮಂಗಲದ ನಿವಾಸಿಗಳು.
ಇಂದಿರಾನಗರದ ಮೂರನೇ ಅಡ್ಡ ರಸ್ತೆಯ ನಿವಾಸಿ ಪಿ.ಜಸ್ವಂತ್ (19), ಅಪ್ಪಾರೆಡ್ಡಿ ಪಾಳ್ಯದ ನಿವಾಸಿ ತಮ್ಮಯ್ಯ (44), ಹಳೇ ಭಿನ್ನಮಂಗಲದ ಎಸ್.ಮಹೇಶ್ ಸೀತಾಪತಿ (23), ಮೋಟಪ್ಪ ಪಾಳ್ಯದ ನಿವಾಸಿ ದೀಪಕ್‌ಕುಮಾರ್ ವರ್ಮ (24) ಅವರಿಗೆ ಕದಂಬ ಚಾಕುವಿನಿಂದ ಇರಿದು ತಲೆಮರೆಸಿಕೊಂಡಿದ್ದ.
ಫೆಬ್ರುವರಿ 8ರಂದು ರಾತ್ರಿ 20 ನಿಮಿಷದ ಅವಧಿಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದು ಪರಾರಿ ಆಗಿದ್ದ.
ಆರೋಪಿ ವಿರುದ್ದವೂ ಈ ಹಿಂದೆ ವಿವಿಧ ಠಾಣೆಗಳಲ್ಲಿ ಮನೆ ಕಳ್ಳತನ, ಹಲ್ಲೆ, ದರೋಡೆ ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ಆರೋಪಿಯನ್ನು ರೌಡಿ ಪಟ್ಟಿಗೆ ಸೇರಿಸಲಾಗಿತ್ತು.
‘ಜಸ್ವಂತ್ ಅವರು ಅಂದು ರಾತ್ರಿ 9.30ರ ಸುಮಾರಿಗೆ ಶುದ್ಧ ನೀರಿನ ಘಟಕದಿಂದ ನೀರು ತರಲು ದ್ವಿಚಕ್ರ ವಾಹನದಲ್ಲಿ ಇಂದಿರಾನಗರದ ಆರನೇ ಮುಖ್ಯ ರಸ್ತೆಯಲ್ಲಿ ತೆರಳುತ್ತಿದ್ದರು. ಅವರನ್ನು ಅಡ್ಡಗಟ್ಟಿದ್ದ ಆರೋಪಿ, ಚಾಕುವಿನಿಂದ ಇರಿದಿದ್ದ. ಮಹೇಶ್ ಸೀತಾಪತಿ ಅವರು ಮಗಳಿಗೆ ಡೈಪರ್ ತರಲು ಕೆ.ಟಿ.ರಸ್ತೆಯ ಐದನೇ ಮುಖ್ಯರಸ್ತೆಯ ಒಂದನೇ ಅಡ್ಡ ರಸ್ತೆಯಲ್ಲಿರುವ ಅಂಗಡಿ ಬಳಿ ನಿಂತಿದ್ದರು. ಅಲ್ಲಿಗೆ ಬಂದಿದ್ದ ಆರೋಪಿ, ಅವರ ಮೇಲೂ ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದ’ ಎಂದು ಪೊಲೀಸರು ಹೇಳಿದರು.
ಪಾನಿಪೂರಿ ವ್ಯಾಪಾರ ನಡೆಸುತ್ತಿದ್ದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ದೀಪಕ್ ಹಾಗೂ ಎಂ.ಐ.ಶೋರೂಂ ಬಳಿ ಪಾನಿಪೂರಿ ಅಂಗಡಿ ಇಟ್ಟುಕೊಂಡಿದ್ದ ತಮ್ಮಯ್ಯ ಅವರಿಗೂ ಇರಿದು ಪರಾರಿ ಆಗಿದ್ದ. ಆರೋಪಿ ಕೃತ್ಯ ಎಸಗಲು ಕಾರಣ ಎಂಬುದುರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.