ರಾಜರಾಜೇಶ್ವರಿನಗರ: ‘ಬೆಂಗಳೂರು ದಕ್ಷಿಣ ತಾಲ್ಲೂಕು ಹಾಲು ಒಕ್ಕೂಟವನ್ನು ಛಿದ್ರಮಾಡಿ (ಮೂರು ಭಾಗ) ಕನಕಪುರ–ಮಾಗಡಿ, ಬೆಂಗಳೂರು ಪೂರ್ವ, ನೆಲಮಂಗಲ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ಹಾಲು ಒಕ್ಕೂಟದ(ಬಮೂಲ್) ನಿರ್ದೇಶಕರ ಆಯ್ಕೆ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎಚ್.ಎಸ್.ಹರೀಶ್‌ಕುಮಾರ್, ಮಾಗಡಿ ಕ್ಷೇತ್ರದ ಅಭ್ಯರ್ಥಿ ನರಸಿಂಹಮೂರ್ತಿ, ನೆಲಮಂಗಲ ಕ್ಷೇತ್ರದ ಅಭ್ಯರ್ಥಿ ಕೇಶವಮೂರ್ತಿ ಪರವಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು.
‘ಬಮೂಲ್ ಚುನಾವಣೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಶ್ರಮಿಸುತ್ತೇನೆ. ನನ್ನ ಕ್ಷೇತ್ರದ ಜನರಿಗೆ ಅನ್ಯಾಯವಾದರೆ ಮುಖ್ಯಮಂತ್ರಿ, ಪಕ್ಷ, ನಾಯಕರನ್ನೂ ಕಡೆಗಣಿಸಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ. ಇದೇ ನನ್ನ ಸಿದ್ಧಾಂತ’ ಎಂದರು.
‘ಸ್ವಾರ್ಥ ಸಾಧನೆ ಮತ್ತು ಅನುಕೂಲಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕನ್ನು ಬೇರೆ ತಾಲ್ಲೂಕುಗಳೊಂದಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಯಾರಿಗೂ ಅನುಕೂಲವಾಗಿಲ್ಲ. ಮಾಗಡಿ ಶಾಸಕ ಎ.ಮಂಜುನಾಥ್ ಶ್ರಮವೂ ವ್ಯರ್ಥವಾಗಿದೆ’ ಎಂದರು.
‘ದಕ್ಷಿಣ ತಾಲ್ಲೂಕು ವ್ಯಾಪ್ತಿಯಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮಾಗಡಿ, ನೆಲಮಂಗಲ, ಬೆಂಗಳೂರು ಪೂರ್ವ ತಾಲ್ಲೂಕಿನಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ಥಿತಿ ಬಂದಿದೆ. ದಕ್ಷಿಣ ತಾಲ್ಲೂಕಿನಿಂದಲೇ ಬಮೂಲ್‌ಗೆ ನಿರ್ದೇಶಕರೊಬ್ಬರನ್ನು ಆಯ್ಕೆ ಮಾಡಿದ್ದರೆ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ರೈತರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗುತ್ತಿತ್ತು’ ಎಂದು ಹೇಳಿದರು.
ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರ ಆಯ್ಕೆಯ ಚುನಾವಣೆಯು ಮೇ 12ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.