ADVERTISEMENT

ತುರ್ತು ಸಂಪರ್ಕಕ್ಕೆ ವ್ಯವಸ್ಥೆ ಮಾಡಿ:ಸಚಿವ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 19:27 IST
Last Updated 13 ಜುಲೈ 2020, 19:27 IST

ಬೆಂಗಳೂರು: 'ಸರ್ಕಾರ ಹಾಗೂ ಜನಪ್ರತಿನಿಧಿಗಳು ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡಬೇಕು. ಅಧಿಕಾರಿಗಳು ಜನರ ಆರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಲು ತುರ್ತು ಸಂಪರ್ಕ ವ್ಯವಸ್ಥೆ ಮಾಡಬೇಕು' ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದರು.

ರಾಜರಾಜೇಶ್ವರಿ ನಗರ ವಲಯದ ಎಲ್ಲ ವಾರ್ಡ್‍ಗಳ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಅವರು ಮಾತನಾಡಿದರು.

'ಕ್ಷೇತ್ರದಲ್ಲಿ ಯಾವುದೇ ಸಮಸ್ಯೆಯಿದ್ದರೂ ಪರಿಹರಿಸಿಕೊಳ್ಳಬಹುದು. ಆದರೆ, ಅಧಿಕಾರಿಗಳೇ ನಮ್ಮ ಗಮನಕ್ಕೆ ತರದಿದ್ದರೆ ಸಮಸ್ಯೆಗಳು ಹೇಗೆ ತಿಳಿಯುತ್ತವೆ?' ಎಂದು ಪ್ರಶ್ನಿಸಿದರು.

ADVERTISEMENT

'ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಜನರು ಆತಂಕಗೊಳ್ಳದಂತೆ ಎಚ್ಚರ ವಹಿಸಬೇಕು. ಅವರ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು. ಆರೋಗ್ಯ ಸಮಸ್ಯೆಗಳಿಗೆ ಯಾರನ್ನು ಸಂಪರ್ಕಿಸಬೇಕು ಎನ್ನುವ ಮಾಹಿತಿ ಪಟ್ಟಿ ಸಿದ್ಧಪಡಿಸಿ. ಅದನ್ನು ಜಾಹೀರಾತುಗಳ ಮೂಲಕ ಜನರಿಗೆ ತಲುಪಿಸಬಹುದು' ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಿಜೆಪಿ ಮುಖಂಡ ಮುನಿರತ್ನ, 'ಪಾಲಿಕೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳು ತಮ್ಮ ಮನೆಯವರಿಗೆ ಸೋಂಕು ಕಾಣಿಸಿಕೊಂಡಿದೆ ಎಂಬ ಭಾವನೆಯಲ್ಲಿ ಕೆಲಸ ಮಾಡಬೇಕು. ಜೀವದ ಬೆಲೆಯನ್ನು ಮೊದಲು ಅರ್ಥಮಾಡಿಕೊಂಡು, ಇದನ್ನು ವೃತ್ತಿ ಎನ್ನದೆ ಸೇವೆ ಎಂದು ಅರಿತು ಕೆಲಸ ನಿರ್ವಹಿಸಿ' ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.