ADVERTISEMENT

‘ಕೈ’ ಕಾರ್ಯಕರ್ತರತ್ತ ಮುನಿರತ್ನ ಚಿತ್ತ: ಮೂಲ ಬಿಜೆಪಿಗರ ಸಿಟ್ಟು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 21:17 IST
Last Updated 19 ಅಕ್ಟೋಬರ್ 2020, 21:17 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ಆರ್‌.ಆರ್.ನಗರ ಕ್ಷೇತ್ರದಲ್ಲಿ ‘ಪಕ್ಷಾಂತರ ಪರ್ವ’ ತಾರಕಕ್ಕೆ ಏರಿರುವ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಕಾಂಗ್ರೆಸ್‌ ಕಾರ್ಯಕರ್ತರನ್ನು ಸಾರಸಗಟು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಈಗಾಗಲೇ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್‌ನ ಮಾಜಿ ಕಾರ್ಪೊರೇಟರ್‌ಗಳು ಬಿಜೆಪಿ ಸೇರಿದ್ದಾರೆ. ಇದೀಗ ಮಾತೃ ಪಕ್ಷದ ತಳ ಹಂತದ ಕಾರ್ಯಕರ್ತರನ್ನೂ ಸೆಳೆಯುತ್ತಿದ್ದಾರೆ.

‘ಮುನಿರತ್ನ ಅವರ ಈ ನಡೆ ಬಿಜೆಪಿ ಮೂಲ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಮತ್ತು ಅವರು ಕಾಂಗ್ರೆಸ್‌ನಲ್ಲಿದ್ದಾಗ ಜತೆಗಿದ್ದ ಕಾರ್ಯಕರ್ತರ ಪಡೆಯನ್ನು ಸಾರಾಸಗಟು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಪಕ್ಷದ ನಾಯಕರ ಬಳಿ ದೂರಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಈ ಚುನಾವಣೆಯನ್ನು ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಮುನಿರತ್ನ ಅವರು ಕ್ಷೇತ್ರದಲ್ಲಿ ಎಲ್ಲ ಅಸ್ತ್ರಗಳನ್ನು ಬಳಸಲು ಸಿದ್ಧರಾಗಿದ್ದಾರೆ. ಕೇವಲ ಬಿಜೆಪಿಯ ಮೂಲ ಕಾರ್ಯಕರ್ತರನ್ನು ನೆಚ್ಚಿಕೊಂಡರೆ ಕಷ್ಟವಾಗಬಹುದು ಎಂಬ ಕಾರಣಕ್ಕೆ ಹಿಂದೆ ತಮ್ಮ ಜತೆಗಿದ್ದವರನ್ನು ಕರೆ ತರುತ್ತಿದ್ದಾರೆ. ಇದರಿಂದ ತಮ್ಮ ಕೆಲಸ ಸಲೀಸಾಗುತ್ತದೆ ಎಂದು ನಂಬಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಹೊಸಕೋಟೆ ಉಪಚುನಾವಣೆಯಲ್ಲಿ ಎಂ.ಟಿ.ಬಿ.ನಾಗರಾಜ್‌ ಅವರ ಸೋಲನ್ನು ಒಂದು ಪಾಠವಾಗಿ ಪರಿಗಣಿಸಿರುವ ಮುನಿರತ್ನ ಅವರು ಅದು ಮರುಕಳಿಸದೇ ಇರಲು ಎಲ್ಲ ರೀತಿಯ ಎಚ್ಚರಿಕೆ ವಹಿಸಿದ್ದಾರೆ. ಮತದಾರರ ಮನೆ– ಮನೆಗೆ ಹೋಗಲು ತಮ್ಮದೇ ಕಾರ್ಯಕರ್ತರ ಪಡೆಯನ್ನು ಬಳಸುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕವೂ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದಾರೆ’ ಎಂದು ಮುನಿರತ್ನ ಅವರ ಆಪ್ತ ವಲಯ ತಿಳಿಸಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಚುನಾವಣೆಯಲ್ಲಿ ಪ್ರಜ್ಞಾಪೂರ್ವಕವಾಗಿ ‘ಒಕ್ಕಲಿಗ’ ಕಾರ್ಡ್‌ ಬಳಸುತ್ತಿರುವುದರಿಂದ, ಇತರ ಸಮುದಾಯಗಳ ಮತವನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸಿದೆ. ಸ್ಥಳೀಯ ಕಾರ್ಯಕರ್ತರ ಅಸಹಕಾರ ಇದ್ದರೂ ಚುನಾವಣೆ ಗೆಲ್ಲುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಹೀಗಾಗಿ ಕಂದಾಯ ಸಚಿವ ಆರ್‌.ಅಶೋಕ ಅವರಿಗೆ ಚುನಾವಣೆ ನೇತೃತ್ವ ನೀಡಿದ್ದರೂ ತಂತ್ರಗಾರಿಕೆಯನ್ನು ಹೆಣೆಯುವ ಉಸ್ತುವಾರಿಯನ್ನು ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.