ADVERTISEMENT

10 ಜಂಕ್ಷನ್‌ಗಳಲ್ಲಿ ದಟ್ಟಣೆ ನಿವಾರಣೆಗೆ ಬಿಬಿಎಂಪಿಗೆ ಶಿಫಾರಸು

ಐಎಸ್‌ಇಸಿನಿಂದ ಕರಡು ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 0:31 IST
Last Updated 29 ಜುಲೈ 2023, 0:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ 10 ಜಂಕ್ಷನ್‌ಗಳಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಕಡಿಮೆ ಮಾಡಲು ಅಲ್ಪಾವಧಿ ಮತ್ತು ದೀರ್ಘಾವಧಿ ತಾಂತ್ರಿಕ ಪ್ರಸ್ತಾವಗಳ ಕರಡು ವರದಿಯನ್ನು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ (ಐಎಸ್‌ಇಸಿ) ನೀಡಿದೆ.

ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದದ ಐಎಸ್‌ಇಸಿ, ‘ಪರಿಸರ ಸಮಸ್ಯೆಗಳು ಮತ್ತು ದಟ್ಟಣೆ: ಬೆಂಗಳೂರು ಅಭಿವೃದ್ಧಿಗೆ ಸುಸ್ಥಿರ ಪರಿಹಾರಗಳ ವಿಕಸನ’ ಎಂಬ ಅಧ್ಯಯನ ನಡೆಸಿದೆ. ಇದರ ವರದಿಯನ್ನು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಅವರಿಗೆ ಕಳುಹಿಸಿದ್ದಾರೆ. ಈ ಶಿಫಾರಸುಗಳ ಕಾರ್ಯಸಾಧ್ಯತೆ ಮತ್ತು ಅನುಷ್ಠಾನದ ಬಗ್ಗೆ ಮುಖ್ಯ ಎಂಜಿನಿಯರ್‌ ಮೂಲಕ ಪರಿಶೀಲಿಸಿ ತ್ವರಿತವಾಗಿ ಅಭಿಪ್ರಾಯ ನೀಡುವಂತೆ ಸೂಚಿಸಿದ್ದಾರೆ.

ಸಿಲ್ಕ್‌ ಬೋರ್ಡ್‌, ಗೊರಗುಂಟೆಪಾಳ್ಯ, ಟಿನ್‌ ಫ್ಯಾಕ್ಟರಿ, ಹೆಬ್ಬಾಳ, ಸಾರಕ್ಕಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್‌, ಇಬ್ಬಲೂರು, ಕಾಡುಬೀಸನಹಳ್ಳಿ, ಡೇರಿ ವೃತ್ತ ಜಂಕ್ಷನ್‌ಗಳಲ್ಲಿ ಪ್ರತ್ಯೇಕವಾಗಿ ಕೈಗೊಳ್ಳಬೇಕಿರುವ ತಾಂತ್ರಿಕ ಕ್ರಮ, ಸಿಗ್ನಲ್‌ ನಿರ್ವಹಣೆ, ಎಲಿವೇಟೆಡ್‌ ವಾಕ್‌ವೇ, ಎಲಿವೇಟೆಡ್‌ ರಸ್ತೆ, ಅಂಡರ್‌ಪಾಸ್‌ಗಳನ್ನು ನಿರ್ಮಿಸಲು ಶಿಫಾರಸು ಮಾಡಲಾಗಿದೆ.

ADVERTISEMENT

ತಾಂತ್ರಿಕ ಪ್ರಸ್ತಾವಗಳು

l ಆರು ಜಂಕ್ಷನ್‌ಗಳಲ್ಲಿ ಸಿವಿಲ್‌ ಕಾಮಗಾರಿ ಸುಮಾರು ₹25 ಕೋಟಿ ವೆಚ್ಚ

l ನಾಲ್ಕು ಕಡೆ ಮೆಟ್ರೊ ಜೊತೆಗೆ 8.25 ಕಿ.ಮೀ (ಪ್ರತಿ ಕಿ.ಮೀಗೆ ₹72 ಲಕ್ಷ) ಪಾದಚಾರಿ ಸುಧಾರಣೆ

l ಸಾರಕ್ಕಿ, ಡೇರಿ ವೃತ್ತ, ಸಿಲ್ಕ್‌ ಬೋರ್ಡ್‌, ಕುಮಾರಸ್ವಾಮಿ ಲೇಔಟ್‌, ಇಬ್ಬಲೂರುಗಳಲ್ಲಿ ₹3.5 ಕೋಟಿ ವೆಚ್ಚದಲ್ಲಿ ಸ್ಕೈವಾಕ್‌ ಮತ್ತು ₹7 ಕೋಟಿ ವೆಚ್ಚದಲ್ಲಿ ಸಿಎಂಟಿಎ ಜಂಕ್ಷನ್‌ನಲ್ಲಿ ಸುರಂಗ ಮಾರ್ಗ.

l ಖಾಸಗಿ ಬಸ್‌ಗಳಿಗೆ ಎಚ್‌ಎಸ್‌ಆರ್‌ ರಸ್ತೆ ಸಮೀಪ ಹಾಗೂ ಬಿಎಂಟಿಸಿ ಬಸ್‌ಗಳಿಗೆ ಸಿಲ್ಕ್‌ ಬೋರ್ಡ್‌ ಸಮೀಪ ವಾಹನ ನಿಲ್ದಾಣಗಳ ಪ್ರತ್ಯೇಕ ನಿರ್ಮಾಣ

l ಕಾಡುಬೀಸನಹಳ್ಳಿ, ಗೊರಗುಂಟೆ ಪಾಳ್ಯದಲ್ಲಿ ‘ಅಡಾಪ್ಟೀವ್‌ ಸಂಚಾರ ಸಿಗ್ನಲ್‌’ ವ್ಯವಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.