ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್ಎಸ್) ಶತಮಾನ ವರ್ಷದ ಆಚರಣೆಯ ಭಾಗವಾಗಿ, ಹಿಂದೂ ಸಮಾಜೋತ್ಸವ ಕಾರ್ಯಕ್ರಮಗಳು ರಾಜ್ಯದ ಗ್ರಾಮೀಣ ಪ್ರದೇಶದ ಮಂಡಲ ಹಾಗೂ ನಗರ– ಪಟ್ಟಣಗಳ ವಾರ್ಡ್ ಮಟ್ಟದಲ್ಲಿ ಜ.18ರಿಂದ ಆರಂಭವಾಗಲಿವೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ನಾ. ತಿಪ್ಪೇಸ್ವಾಮಿ, ‘ಸಮಾಜೋತ್ಸವ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ್, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಹಾಗೂ ನಾಗರಿಕ ಶಿಷ್ಟಾಚಾರ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಕೆಲವು ಕಡೆ ಗೋಪೂಜೆ, ಶೋಭಾಯಾತ್ರೆ, ಬೈಕ್ ರ‍್ಯಾಲಿ, ಸ್ವದೇಶಿ ಉತ್ಪನ್ನ ಪ್ರದರ್ಶನ-ಮಾರಾಟ, ಸಾಂಸ್ಕೃತಿಕ-ದೇಶಭಕ್ತಿ ಕಾರ‍್ಯಕ್ರಮ ಆಯೋಜಿಸಲಾಗಿದೆ’ ಎಂದರು.
ಫೆಬ್ರುವರಿ 1ರವರೆಗೆ ರಾಜ್ಯದ ದಕ್ಷಿಣ ಪ್ರಾಂತ್ಯ ಹಾಗೂ ಫೆ.28ರವರೆಗೆ ಉತ್ತರ ಪ್ರಾಂತ್ಯದಲ್ಲಿ ಒಟ್ಟು 3 ಸಾವಿರ ಕಾರ್ಯಕ್ರಮಗಳು ನಡೆಯಲಿವೆ. ಧರ್ಮ, ಸಮಾಜ, ಸಂಸ್ಕೃತಿ, ರಾಷ್ಟ್ರ ಕುರಿತ ವಿಷಯಗಳು, ನಮ್ಮ ದೇವಾಲಯಗಳು ಸಮಾಜ ಜಾಗೃತಿ ಕೇಂದ್ರಗಳಾಗಬೇಕು ಎಂಬ ಆಶಯದಡಿ ಜಾಗೃತಿ ಮೂಡಿಸುವುದು ಸಮಾಜೋತ್ಸವದ ಉದ್ದೇಶ ಎಂದು ಅವರು ವಿವರಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ನಾಗರಿಕ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮಂಡಲಗಳಲ್ಲಿ ಹಿಂದೂ ಸಮ್ಮೇಳನ, ತಾಲ್ಲೂಕು ಮಟ್ಟದಲ್ಲಿ ಸಾಮಾಜಿಕ ಸದ್ಭಾವನಾ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.