
ಯಲಹಂಕ: ‘ಹಿಂದೂಗಳಲ್ಲಿ ಸೂಕ್ತ ಜಾಗೃತಿ, ಒಗ್ಗಟ್ಟು ಹಾಗೂ ರಾಷ್ಟ್ರಪ್ರಜ್ಞೆ ಮೂಡದಿದ್ದರೆ 2050ರ ವೇಳೆಗೆ ಭಾರತ ಆಡಳಿತಾತ್ಮಕವಾಗಿ ಹಿಂದೂಗಳಿಂದ ಕೈತಪ್ಪುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಎಂ.ಆರ್.ಅನಂತ್ ಎಚ್ಚರಿಸಿದರು.
ಆರ್‌ಎಸ್‌ಎಸ್ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು, ಯಲಹಂಕ ಕ್ಷೇತ್ರ ಬಿಜೆಪಿ ಸಹಯೋಗದಲ್ಲಿ ಸಿಂಗನಾಯಕನಹಳ್ಳಿಯಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಯಲಹಂಕ ಕ್ಷೇತ್ರದ ನಗರ ಪ್ರದೇಶದ ಪ್ರತಿಯೊಂದು ವಾರ್ಡ್ ಹಾಗೂ ಗ್ರಾಮೀಣ ಭಾಗದ ಪ್ರತಿ ಹಳ್ಳಿಯ ಮಟ್ಟದಲ್ಲಿ ಹಿಂದೂ ಸಮಾಜೋತ್ಸವ ಆಚರಿಸಲಾಗಿದೆ. ಪರಕೀಯರಿಂದ ಹಿಂದೂ ಸಮಾಜ ರಕ್ಷಿಸಲು ಜಾಗೃತಿ ಮೂಡಿಸುವುದೇ ಸಮಾಜೋತ್ಸವದ ಉದ್ದೇಶ’ ಎಂದು ತಿಳಿಸಿದರು.
ಆದಿ ಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಟಿ.ಚೆಲುವರಾಜ್ ಉಪಸ್ಥಿತರಿದ್ದರು.
ಶೋಭಾಯಾತ್ರೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿಂಗನಾಯಕನಹಳ್ಳಿಯಲ್ಲಿ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಶೋಭಾಯಾತ್ರೆ ನಡೆಯಿತು. ಭಾರತಾಂಬೆ, ಮೈಲಪ್ಪನಹಳ್ಳಿ, ಹೊನ್ನೇನಹಳ್ಳಿ ಗ್ರಾಮದೇವತೆ ಮೂರ್ತಿಗಳೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.