ADVERTISEMENT

ಆರ್‌ಟಿಇ ಪರ ಹೋರಾಟ ಸಂಘದಿಂದ ಮುಖ್ಯಮಂತ್ರಿ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:14 IST
Last Updated 22 ಆಗಸ್ಟ್ 2019, 20:14 IST
   

ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಿಂದಾಗಿ (ಆರ್‌ಟಿಇ) ರಾಜ್ಯದಲ್ಲಿ ಆರು ವರ್ಷಗಳಲ್ಲಿ 6.50 ಲಕ್ಷ ಬಡ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವುದು ಸಾಧ್ಯವಾಗಿತ್ತು. ಹೀಗಾಗಿ ಆರ್‌ಟಿಇ ಕಲಂ 12 (1) ಸಿ ಅನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಒತ್ತಾಯಿಸಲಾಗಿದೆ.

ಆರ್‌ಟಿಇ ಸ್ಟೂಡೆಂಟ್ಸ್‌ ಆಂಡ್‌ ಪೇರೆಂಟ್ಸ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಯೋಗಾನಂದ ನೇತೃತ್ವದಲ್ಲಿ ಗುರುವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ನಿಯೋಗ ಈ ಸಂಬಂಧ ಮನವಿ ಸಲ್ಲಿಸಿತು.

‘2012ರಲ್ಲಿ ನೀವು ಮುಖ್ಯಮಂತ್ರಿ ಆಗಿದ್ದಾಗ ಆರ್‌ಟಿಇ ಕಾಯ್ದೆಗೆ ನಿಯಮಾವಳಿ ರೂಪಿಸಿ ಜಾರಿಗೆ ತರಲಾಗಿತ್ತು. ಅದರಿಂದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಯಿತು. ಹಿಂದಿನ ಸರ್ಕಾರ ಕೆಲವೇ ಕೆಲವು ಖಾಸಗಿ ಶಾಲೆಗಳ ಲಾಬಿಗೆ ಮಣಿದು ಆರ್‌ಟಿಇ ಕಾಯ್ದೆ ನಿಯಮ 4ಕ್ಕೆ ತಿದ್ದುಪಡಿ ತಂದಿದ್ದರಿಂದ 1.50 ಲಕ್ಷ ಪೋಷಕರು ಮತ್ತು ಅವರ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುವಂತಾಯಿತು’ ಎಂದು ವಿವರಿಸಿದರು.

ADVERTISEMENT

‘ಸರ್ಕಾರದ ನಿರ್ಧಾರ ಪ್ರಶ್ನಿಸಿ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿತ್ತು. ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಕೋರ್ಟ್‌ ಇದೀಗ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಲು ಆದೇಶ ನೀಡಿದೆ. ಸರ್ಕಾರ ಇನ್ನು ಮುಂದಾದರೂ ಈ ಹಿಂದಿನ ರೂಪದಲ್ಲೇ ಆರ್‌ಟಿಇ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.