ADVERTISEMENT

ಕ್ರೆಡಲ್‌ನಿಂದ 'ರನ್ ವಿತ್ ದಿ ವಿಂಡ್' ಮ್ಯಾರಥಾನ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 19:03 IST
Last Updated 14 ಜೂನ್ 2025, 19:03 IST
ನಾಗರಬಾವಿಯ ಕ್ರೆಡೆಲ್‌ ಕಚೇರಿ‌ ಆವರಣದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಲಾಯಿತು
ನಾಗರಬಾವಿಯ ಕ್ರೆಡೆಲ್‌ ಕಚೇರಿ‌ ಆವರಣದಲ್ಲಿ ಮ್ಯಾರಥಾನ್‌ಗೆ ಚಾಲನೆ ನೀಡಲಾಯಿತು   

ಬೆಂಗಳೂರು: ವಿಶ್ವ ಪವನ ದಿನಕ್ಕೆ (ಜೂನ್ 15) ಪೂರ್ವಭಾವಿಯಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವು ಭಾರತೀಯ ಪವನ ಶಕ್ತಿ ಸಂಘ (ಐಡಬ್ಲ್ಯುಪಿಎ) ಮತ್ತು ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಹಯೋಗದೊಂದಿಗೆ ಶನಿವಾರ 'ರನ್ ವಿತ್ ದಿ ವಿಂಡ್' ಮ್ಯಾರಥಾನ್ ಆಯೋಜಿಸಿತ್ತು.‌

ಪವನ ಶಕ್ತಿಯ ಅಗಾಧ ಸಾಮರ್ಥ್ಯ ಮತ್ತು ಸುಸ್ಥಿರ ಭವಿಷ್ಯ ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಈ ಓಟಕ್ಕೆ ನಾಗರಬಾವಿಯ ಕ್ರೆಡಲ್‌ ಕಚೇರಿಯ ಆವರಣದಲ್ಲಿ ಚಾಲನೆ ನೀಡಲಾಯಿತು.

ಹಸಿರು, ಸುಸ್ಥಿರ ಕರ್ನಾಟಕದತ್ತ ಸಾಮೂಹಿಕ ಹೆಜ್ಜೆಯ ದ್ಯೋತಕವಾಗಿದ್ದ 2ಕೆ ಮತ್ತು 5ಕೆ ವಿಭಾಗಗಳ ಓಟದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ವೃತ್ತಿಪರರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಕ್ರೆಡಲ್‌ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ‘ನವೀಕರಿಸಬಹುದಾದ ಇಂಧನ ವಲಯವನ್ನು ಮುನ್ನಡೆಸುವಲ್ಲಿ ಪವನ ಶಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕವನ್ನು ದೇಶದಲ್ಲಿಯೇ ಮೊದಲ ರಾಜ್ಯವನ್ನಾಗಿಸುವ ಗುರಿ ಹೊಂದಿದ್ದೇವೆ’ ಎಂದರು.

‘2024–25ರ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ದಾಖಲೆಯ 1,332 ಮೆಗಾವಾಟ್ ಪವನ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿದ್ದೇವೆ. ಈ ಮೂಲಕ ಗುಜರಾತ್ ಮತ್ತು ತಮಿಳುನಾಡನ್ನು ನಾವು ಹಿಂದಿಕ್ಕಿದ್ದೇವೆ' ಎಂದು ಹೇಳಿದರು.

'ಒಟ್ಟು 7,351 ಮೆಗಾವಾಟ್ ಸ್ಥಾಪಿತ ಪವನ ವಿದ್ಯುತ್ ಸಾಮರ್ಥ್ಯದೊಂದಿಗೆ, ರಾಜ್ಯವು ದೇಶದ ಪವನ ವಿದ್ಯುತ್ ವಲಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ' ಎಂದು ಅವರು ಹೇಳಿದರು.

ಐಡಬ್ಲ್ಯುಪಿಎ ಉಪಾಧ್ಯಕ್ಷ ಯು.ಬಿ. ರೆಡ್ಡಿ ಮಾತನಾಡಿ, ‘ಪವನ ಶಕ್ತಿಯ ಸಾಮರ್ಥ್ಯ ಹೆಚ್ಚಳಕ್ಕೆ ಒತ್ತು ನೀಡುವ ಮೂಲಕ 2070ರ ವೇಳೆಗೆ ಇಂಗಾಲದ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿ ತಲುಪಬಹುದಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಐಡಬ್ಲ್ಯುಪಿಎ ಬದ್ಧವಾಗಿದೆ’ ಎಂದರು.

ಎಂಎನ್‌ಆರ್‌ಇ ನಿರ್ದೇಶಕ ಪಿ.ಕೆ.ದಾಸ್, ಎನ್‌ಐಡಬ್ಲ್ಯೂಇನ ಪ್ರಧಾನ ನಿರ್ದೇಶಕ ರಾಜೇಶ್‌ ಕತ್ಯಾಲ್‌, ಕೆಎಸ್‌ಪಿಡಿಸಿಎಲ್‌ನ ಸಿಇಓ ಟಿ.ಎಂ. ಶಿವಪ್ರಕಾಶ್‌, ಕೆಎಸ್‌ಪಿಡಿಸಿಎಲ್‌ ಪ್ರಧಾನ ವ್ಯವಸ್ಥಾಪಕ ಅಮರನಾಥ್‌ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.