ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ವಿಭಾಗದಲ್ಲಿ ಕುವೆಂಪು-ಪುಷ್ಕಿನ್ ಸಾಹಿತ್ಯೋತ್ಸವದೊಂದಿಗೆ ರಷ್ಯನ್ ಭಾಷಾ ಕೇಂದ್ರವನ್ನು ಉದ್ಘಾಟಿಸಲಾಯಿತು.
ಜಾಗತಿಕ ಭಾಷೆಗಳ ಕೇಂದ್ರದ 40ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಈ ಸಮಾರಂಭದಲ್ಲಿ ಮಾತನಾಡಿದ ಕುಲಸಚಿವ ಪ್ರೊ. ಬಿ.ರಮೇಶ್, ‘ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಶಿಕ್ಷಣ ಹಾಗೂ ವೃತ್ತಿಪರ ಬೆಳವಣಿಗೆಗೆ ಮತ್ತು ಹೊಸ ಅವಕಾಶಗಳಿಗೆ ಈ ಕೇಂದ್ರ ನಾಂದಿ ಹಾಡಲಿದೆ’ ಎಂದರು.
ಜಾಗತಿಕ ಭಾಷೆಗಳ ಕೇಂದ್ರದ ನಿರ್ದೇಶಕಿ ಜ್ಯೋತಿ ವೆಂಕಟೇಶ್ ಮಾತನಾಡಿ, ‘ರಷ್ಯನ್ ಭಾಷಾ ಕೇಂದ್ರವು ಭಾರತ ಮತ್ತು ರಷ್ಯಾ ನಡುವಿನ ಭಾಷಾ ಹಾಗೂ ಸಾಂಸ್ಕೃತಿಕ ವಿನಿಮಯವನ್ನು ಬಲಪಡಿಸುವ ಉದ್ದೇಶ ಹೊಂದಿದೆ’ ಎಂದು ವಿವರಿಸಿದರು.
ಸಾಹಿತ್ಯೋತ್ಸವದ ಭಾಗವಾಗಿ ನಡೆದ ಸಂವಾದದಲ್ಲಿ ಲೇಖಕ ಕೆ.ಸಿ.ಶಿವಾರೆಡ್ಡಿ, ‘ಕುವೆಂಪು ಸಾಹಿತ್ಯ ರಚನೆ ಮತ್ತು ಚಿಂತನೆಯ ಮೇಲೆ ರಷ್ಯಾದ ಮೇರು ಸಾಹಿತಿ ಟಾಲ್ ಸ್ಟಾಯ್ ಪ್ರಭಾವ ಅಗಾಧವಾಗಿತ್ತು’ ಎಂದು ವಿಶ್ಲೇಷಿಸಿದರು. ರಷ್ಯಾದ ಪ್ರತಿನಿಧಿ ಎಕೆತಿರಿನಾ ಡಿನ್ಯಾಕ್ ಪುಷ್ಕಿನ್ ಬದುಕು ಮತ್ತು ಬರಹದ ಕುರಿತು ವಿವರಿಸಿದರು.
ಕಾರ್ಯಕ್ರಮದ ಭಾಗವಾಗಿ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕುವೆಂಪು ಅವರ 'ಬೆರಳ್‌ಗೆ ಕೊರಳ್' ನಾಟಕ ಹಾಗೂ ರಷ್ಯನ್ ಮಕ್ಕಳು ಬ್ಯಾಲೆ ನೃತ್ಯವನ್ನು ಪ್ರದರ್ಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.