
ಬೆಂಗಳೂರು: ‘ಕೃತಕ ಬುದ್ದಿಮತ್ತೆ, ಸೈಬರ್ ಭದ್ರತೆ, ಕ್ವಾಂಟಮ್ ಕಂಪ್ಯೂಟಿಂಗ್ ಸೇರಿ ಹಲವು ವಿಷಯಗಳಲ್ಲಿ ಶಿಕ್ಷಣ ಪಡೆಯುವ ಜತೆಗೆ ಉನ್ನತ ಅಧ್ಯಯನಕ್ಕೆ ಅವಕಾಶವಿದ್ದು, ವಿದ್ಯಾರ್ಥಿಗಳು ನಿಖರ ಜ್ಞಾನದೊಂದಿಗೆ ಹೊಸ ಮಾರ್ಗ ಕಂಡುಕೊಳ್ಳಲು ಪ್ರೇರೇಪಿಸಬೇಕು’ ಎಂದು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಡಿ.ಉಲ್ಮನ್ ತಿಳಿಸಿದರು.
ಆರ್.ವಿ. ಕಾಲೇಜ್ ಆಫ್ ಎಂಜಿನಿಯರಿಂಗ್ ಸಹಯೋಗದೊಂದಿಗೆ ಪ್ರಯೋಗ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ರಿಸರ್ಚ್ ಆಯೋಜಿಸಿದ್ದ ಸಂವಾದ, ಭವಿಷ್ಯದ ವೃತ್ತಿಜೀವನ, ಕೃತಕ ಬುದ್ಧಿಮತ್ತೆಯಂತಹ ಅಡ್ಡಿಗಳು ಮತ್ತು ಕಂಪ್ಯೂಟರ್ ವಿಜ್ಞಾನ ಶಿಕ್ಷಣದಿಂದ ಬದಲಾಗುತ್ತಿರುವ ನಿರೀಕ್ಷೆಗಳು ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
‘ಕಂಪ್ಯೂಟರ್ ಎಂಜಿನಿಯರಿಂಗ್ ವಿಷಯದಲ್ಲಿ ಕೋರ್ ಪರಿಕಲ್ಪನೆ, ಕಾರ್ಯಕ್ರಮದ ಭಾಷೆ, ಮಾದರಿಯ ಕುರಿತು ಎಲ್ಲ ಆಯಾಮಗಳಲ್ಲೂ ತಿಳಿದುಕೊಳ್ಳಬೇಕು. ಜ್ಞಾನ ಬೇರೆ. ವಿಷಯವನ್ನು ಮೂಲ ಜ್ಞಾನದೊಂದಿಗೆ ವಿಶ್ಲೇಷಿಸುವುದನ್ನು ಕಲಿಯುವುದು ಬೇರೆ’ ಎಂದು ಸಲಹೆ ನೀಡಿದರು.
‘ವಿಷಯದಲ್ಲಿ ನೀವು ಸಂಶೋಧನೆ ಕೈಗೊಳ್ಳುವ ಯೋಚನೆಯಿದ್ದರೆ, ಇದಕ್ಕೆ ವಿಸ್ತೃತ ತಯಾರಿ ಬೇಕಾಗುತ್ತದೆ. ತಾಳ್ಮೆ ಹಾಗೂ ತೊಡಗಿಸಿಕೊಳ್ಳುವಿಕೆ ಅತಿ ಮುಖ್ಯ. ಈಗ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಪ್ರಭಾವ ಎಲ್ಲೆಡೆ ಆಗುತ್ತಿದೆ. ಈ ಕುರಿತು ಭಯ ಬೇಡ. ಅದು ಎಂದಿಗೂ ಮಾನವನ ಜ್ಞಾನಕ್ಕೆ ಸ್ಪರ್ಧೆ ನೀಡಲಾರದು. ಹಾಗೆಂದು ಅದನ್ನು ನಿರ್ಲಕ್ಷಿಸುವಂತೆಯೂ ಇಲ್ಲ’ ಎಂದು ನುಡಿದರು.
ಆರ್‌ವಿಸಿಇಯ ಪ್ರಾಂಶುಪಾಲ ಡಾ.ಕೆ.ಎನ್.ಸುಬ್ರಮಣ್ಯಂ ಮತ್ತು ಸುಮುಖಾ ಉಪಾಧ್ಯಾಯ ಅವರ
ಮಾರ್ಗದರ್ಶನದಲ್ಲಿ ಸಂವಾದ ನಡೆಯಿತು.