ADVERTISEMENT

ತಮಿಳುನಾಡಿನಲ್ಲಿ ಸುತ್ತಾಡುತ್ತಿದ್ದ ಸಂಪತ್‌ರಾಜ್

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 21:18 IST
Last Updated 19 ನವೆಂಬರ್ 2020, 21:18 IST

ಬೆಂಗಳೂರು: ಸಿಸಿಬಿ ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡಿದ್ದ ಮಾಜಿ ಮೇಯರ್ ಆರ್‌. ಸಂಪತ್‌ರಾಜ್, ತಮಿಳುನಾಡಿನಲ್ಲಿ ಸುತ್ತಾಡುತ್ತಿದ್ದರೆಂಬುದು ತನಿಖೆಯಿಂದ ಗೊತ್ತಾಗಿದೆ.

ಡಿ.ಜೆ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ವೇಳೆ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಸಂಪತ್‌ರಾಜ್ ಪ್ರಮುಖ ಆರೋಪಿ. ಪ್ರಕರಣದ ವಿಚಾರಣೆಗೆ ನೋಟಿಸ್‌ ನೀಡುತ್ತಿದ್ದಂತೆ ಕೊರೊನಾ ಸೋಂಕು ತಗುಲಿರುವುದಾಗಿ ಹೇಳಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯಿಂದ ಏಕಾಏಕಿ ಬಿಡುಗಡೆ ಆಗಿದ್ದ ಸಂಪತ್‌ರಾಜ್, ತಲೆಮರೆಸಿಕೊಂಡು ಓಡಾಡುತ್ತಿದ್ದರು. ಇದೇ 16ರಂದು ತಮ್ಮ ಮನೆಯಲ್ಲೇ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ADVERTISEMENT

‘ರಿಯಾಜುದ್ದೀನ್ ಎಂಬುವರಿಗೆ ಸೇರಿದ್ದ ನಾಗರಹೊಳೆಯಲ್ಲಿರುವ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಂಪತ್‌ರಾಜ್, ಅಲ್ಲಿಯೇ ಕೆಲ ದಿನ ತಂಗಿದ್ದರು. ನಂತರ ತಮಿಳುನಾಡಿಗೆ ಹೋಗಿದ್ದರು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸೇರಿದ್ದ ಜಾಗಗಳಲ್ಲಿ ಉಳಿದುಕೊಂಡಿದ್ದರು. ವೆಲ್ಲೂರು ಸೇರಿದಂತೆ ಹಲವು ದೇವಸ್ಥಾನಗಳಿಗೆ ಹೋಗಿದ್ದರು. ದೀಪಾವಳಿ ಹಬ್ಬಕ್ಕೆ ಬೆಂಗಳೂರಿನ ಮನೆಗೆ ಬಂದಿದ್ದಾಗಲೇ ಅವರನ್ನು ಬಂಧಿಸಲಾಯಿತು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಮತ್ತೊಂದು ದಿನ ಕಸ್ಟಡಿಗೆ; ಬಂಧಿತ ಸಂಪತ್‌ರಾಜ್ ಅವರನ್ನು ಎರಡು ದಿನ ಸಿಸಿಬಿ ಕಸ್ಟಡಿಗೆ ನೀಡಲಾಗಿತ್ತು. ಕಸ್ಟಡಿ ಅವಧಿ ಮುಗಿದಿದ್ದರಿಂದ ಆರೋಪಿಯನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮತ್ತೊಂದು ದಿನ ಸಂಪತ್‌ರಾಜ್ ಅವರನ್ನು ಸಿಸಿಬಿ ಪೊಲೀಸರ ಕಸ್ಟಡಿಗೆ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.