ADVERTISEMENT

ಸಾಮ್ರಾಟ್ ಜ್ಯುವೆಲ್ಸ್‌ ದರೋಡೆ ಯತ್ನ: ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದ ಸೂತ್ರಧಾರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:37 IST
Last Updated 25 ಆಗಸ್ಟ್ 2019, 19:37 IST
   

ಬೆಂಗಳೂರು: ಪ್ಯಾಲೆಸ್‌ ಗುಟ್ಟಹಳ್ಳಿ ಮುಖ್ಯರಸ್ತೆಯಲ್ಲಿರುವ ಸಾಮ್ರಾಟ್ ಜ್ಯುವೆಲ್ಸ್‌ ಚಿನ್ನದ ಮಳಿಗೆಯಲ್ಲಿ ನಡೆದಿದ್ದ ದರೋಡೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಪ್ರಹ್ಲಾದ್ ಅಲಿಯಾಸ್‌ ಕೈಲಾಸ್‌ ಚೌಧರಿ ಎಂಬಾತನನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ದರೋಡೆಗೆ ಸಂಚು ರೂಪಿಸಿದ್ದ ಚೌಧರಿ, ತನ್ನ ಸಹಚರರರ ಮೂಲಕ ಈ ಕೃತ್ಯ ಮಾಡಿಸಿದ್ದ. ಬಳಿಕ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತರಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್‌ ರಾಥೋಡ್‌ ತಿಳಿಸಿದರು.

ಈ ಪ್ರಕರಣದಲ್ಲಿ ಈಗಾಗಲೇ ಸಿಕ್ಕಿಬಿದ್ದಿರುವ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಸೂತ್ರಧಾರ ಚೌಧರಿ ಎನ್ನುವುದು ಗೊತ್ತಾಗಿತ್ತು. ಹೀಗಾಗಿ, ಪೊಲೀಸರು ಆತನ ಬೆನ್ನುಬಿದ್ದಿದ್ದರು. ‘ಚೌಧರಿಯನ್ನೂ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ. ಬೇರೆ ಪ್ರಕರಣಗಳಲ್ಲೂ ಆತ ಭಾಗಿಯಾಗಿರುವ ಶಂಕೆ ಇದೆ’ ಎಂದು ರಾಥೋಡ್‌ ಹೇಳಿದರು.

ADVERTISEMENT

‘ಪ್ರಕರಣದ ಆರೋಪಿಗಳ ಪೈಕಿ ಸೊಲ್ಲಾಪುರದ ಬಾಲಾಜಿ ರಮೇಶ ಗಾಯಕವಾಡ ಬಿಹಾರದವರ ಜೊತೆ ಸೇರಿ ಇದೇ ಮಾರ್ಚ್‌ ತಿಂಗಳಲ್ಲಿ ಸತಾರಾ ಜಿಲ್ಲೆಯಲ್ಲಿರುವ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಶಾಖೆಯಲ್ಲಿ ದರೋಡೆ ಮಾಡಿದ್ದ. ಅಲ್ಲಿಂದ ಒಟ್ಟು ಆರು ಮಂದಿ ಆರೋಪಿಗಳು, ₹ 23 ಲಕ್ಷ ದೋಚಿ, ತಲಾ ₹ 3.50 ಲಕ್ಷದಂತೆ ಹಂಚಿಕೊಂಡಿದ್ದರು. ಬಾಲಾಜಿಯನ್ನು ಬಿಟ್ಟು, ಇತರ ಎಲ್ಲರೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು’ ಎಂದೂ ಡಿಸಿಪಿ ಹೇಳಿದರು.

‘ಬಾಲಾಜಿ ತನ್ನ ಪಾಲಿನ ಹಣದ ಸಮೇತ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದ. ಕೈಯಲ್ಲಿದ್ದ ಹಣ ಖರ್ಚಾಗುತ್ತಿದ್ದಂತೆಯೇ ಮತ್ತೊಂದು ಕೃತ್ಯಕ್ಕೆ ಮುಂದಾಗಿದ್ದ. ಅದೇ ಹಣದಲ್ಲಿ ಬಿಹಾರದಿಂದ ಪಿಸ್ತೂಲ್‌ ಕೂಡಾ ತರಿಸಿದ್ದ. ಅಲ್ಲದೇ, ತನ್ನಂತೆ ಹಣದ ಅವ
ಶ್ಯಕತೆ ಇರುವವರನ್ನು ಹುಡುಕುತ್ತಿದ್ದಾಗ ರಾಜಸ್ಥಾನದವನೇ ಆಗಿರುವ ಚೌಧರಿಯ ಪರಿಚಯವಾಗಿದೆ. ಸಾಮ್ರಾಟ್‌ ಮಳಿಗೆ ದರೋಡೆಗೆ ಅದಾಗಲೇ ಸಂಚು ರೂಪಿಸಿದ್ದ ಚೌಧರಿ, ಬಾಲಾಜಿಯ ಜೊತೆಗೆ ತನ್ನ ಕೃತ್ಯಕ್ಕೆ ರಾಜಸ್ಥಾನಿಗಳೇ ಬೇಕೆಂಬ ಕಾರಣಕ್ಕೆ ಶ್ರೀರಾಮ ಬಿಷ್ಣೋಯಿ ಮತ್ತು ಓಂ ಪ್ರಕಾಶ್‌ನನ್ನೂ ಕರೆಸಿಕೊಂಡಿದ್ದರು. ಇನ್ನೊಬ್ಬ ಬೇಕು ಅಂದಾಗ ಹರಿಯಾಣದ ವ್ಯಕ್ತಿಯನ್ನು ಕರೆಸಿಕೊಂಡು ತಂಡ ಕಟ್ಟಿದ್ದಾನೆ’ ಎಂದರು.

‘ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಚೌಧರಿ ಕೆಮಿಕಲ್ಸ್‌ ಮಾರಾಟ ಮಾಡುತ್ತಿದ್ದ. ಬಳಿಕ ಸಣ್ಣ ಕಿರಾಣಿ ಅಂಗಡಿಯನ್ನೂ ಆರಂಭಿಸಿದ್ದ. ಈ ಕೃತ್ಯದಲ್ಲಿ ತಾನು ಮುಂಚೂಣಿಯಲ್ಲಿ ಕಾಣಿಸಿಕೊಂಡಿಲ್ಲ. ತನ್ನ ಸಹಚರರಿಂದ ಕೃತ್ಯ ಮಾಡಿಸಿದ್ದಾನೆ’ ಎಂದರು.

‘ಮೊದಲ ಬಾರಿ ಕೃತ್ಯ’

‘ಬಾಲಾಜಿ ಹೊರತಾಗಿ ಇತರ ಆರೋಪಿಗಳು ಮೊದಲ ಬಾರಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಗುಂಡು ಹಾರಿಸಿದ ತಕ್ಷಣ ಚಿನ್ನದ ಮಳಿಗೆಯ ಮಾಲೀಕ ಅಶಿಷ್‌ ಅವರ ಪತ್ನಿ ರಾಖಿ ಪ್ರತಿರೋಧ ತೋರಿಸಿದಾಗ ಎಲ್ಲರೂ ಗಾಬರಿಗೊಂಡಿದ್ದಾರೆ. ಹೀಗಾಗಿ ಅವರ ಯತ್ನ ವಿಫಲವಾಗಿದೆ’ ಎಂದೂ ಡಿಸಿಪಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.