ADVERTISEMENT

ಸಂಯುಕ್ತ ಹೋರಾಟದಿಂದ ಸಂಸದರಿಗೆ ವಿಪ್‌ ಜಾರಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 15:56 IST
Last Updated 18 ಜುಲೈ 2021, 15:56 IST

ಬೆಂಗಳೂರು: ಮುಂಗಾರು ಅಧಿವೇಶನವು ಇದೇ 19ರಿಂದ ಆರಂಭವಾಗಲಿದ್ದು, ಇದರಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸಂಯುಕ್ತ ಹೋರಾಟ–ಕರ್ನಾಟಕ ಎಲ್ಲಾ ಸಂಸದರಿಗೆ ಮತದಾರರ ವಿಪ್‌ ಜಾರಿಗೊಳಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರೈತಾಂದೋಲನ ರೂಪಿಸಿರುವ ಈ ಸಂಘಟನೆಯು ರಾಜ್ಯದ ಎಲ್ಲಾ ಸಂಸದರಿಗೂ ಈಗಾಗಲೇ ವಿಪ್‌ ರವಾನಿಸಿದೆ. ಇದನ್ನು ಉಲ್ಲಂಘಿಸಿದರೆ ಸಂಸದರು ಪಾಲ್ಗೊಳ್ಳುವ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ತೀವ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದೆ.

‘ಅಧಿವೇಶನದ ಎಲ್ಲಾ ದಿನಗಳಲ್ಲೂ ಸಂಸತ್ತಿನಲ್ಲಿ ಹಾಜರಿರಬೇಕು. ರೈತರ ಸಮಸ್ಯೆಯ ಬಗ್ಗೆ ಚರ್ಚಿಸಬೇಕು. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ರೈತರು ಸತತ ಆರು ತಿಂಗಳಿಂದ ಧರಣಿ ನಡೆಸುತ್ತಿದ್ದು ಅವರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಸರ್ಕಾರವು ಈ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಕಲಾಪ ನಡೆಸಲು ಅವಕಾಶ ನೀಡಬಾರದು’ ಎಂದು ತಿಳಿಸಿದೆ.

ADVERTISEMENT

‘ರೈತರ ಪರವಾದ ನಿರ್ಣಯಗಳನ್ನು ಮಂಡಿಸಿದಾಗ ಅದನ್ನು ಯಾರೂ ವಿರೋಧಿಸಬಾರದು. ಮತದಾನದಿಂದಲೂ ದೂರ ಉಳಿಯಬಾರದು’ ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.