ADVERTISEMENT

ಹತ್ಯೆಗೂ ಸನಾತನ ಸಂಸ್ಥೆಗೂ ಸಂಬಂಧವಿಲ್ಲ: ಚೇತನ ರಾಜಹಂಸ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 19:20 IST
Last Updated 4 ಡಿಸೆಂಬರ್ 2018, 19:20 IST
   

ಬೆಂಗಳೂರು: ‘ಸನಾತನ ಸಂಸ್ಥೆಯ ಗ್ರಂಥ ಓದಿ, ಗೌರಿ ಲಂಕೇಶ್ ಅವರ ಹತ್ಯೆ ಮಾಡಲಾಗಿದೆ’ ಎಂಬ ವಿಶೇಷ ತನಿಖಾ ದಳದ (ಎಸ್‌ಐಟಿ) ಹೇಳಿಕೆ ಹಾಸ್ಯಾಸ್ಪದವಾದದ್ದು. ಸುಖಾಸುಮ್ಮನೇ ಸಂಸ್ಥೆಯನ್ನು ಪ್ರಕರಣದಲ್ಲಿ ಎಳೆದು ತಂದು ಮಾನಹಾನಿ ಮಾಡಲಾಗುತ್ತಿದೆ’ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ ರಾಜಹಂಸ್ ದೂರಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ತಂಡ, ವಿವಿಧ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರ ವಿರುದ್ಧ ನ್ಯಾಯಾಲಯಕ್ಕೆ ಹೆಚ್ಚುವರಿ ದೋ‍ಷಾರೋಪ ಪಟ್ಟಿ ಸಲ್ಲಿಸಿದೆ. ಬಂಧಿತರು ಬೇರೆ ಸಂಘಟನೆಯವರಾಗಿದ್ದರೂ ಸನಾತನ ಸಂಸ್ಥೆಯನ್ನೇ ಗುರಿಯಾಗಿಸುವ ಪ್ರಯತ್ನ ಪಟ್ಟಿಯಲ್ಲಿ ಕಾಣಿಸುತ್ತಿದೆ’ ಎಂದರು.

‘ಸಂಸ್ಥೆಯು 1995ರಿಂದ ‘ಕ್ಷಾತ್ರಧರ್ಮ ಸಾಧನೆ’ ಗ್ರಂಥ ಪ್ರಕಟಿಸುತ್ತಿದೆ. ಈ ಗ್ರಂಥ ಓದಿರುವವರ ಪೈಕಿ ಎಷ್ಟು ಮಂದಿ, ಎಷ್ಟು ಜನರನ್ನು ಹತ್ಯೆ ಮಾಡಿದ್ದಾರೆ ಎಂಬುದನ್ನು ಎಸ್‌ಐಟಿ ಪೊಲೀಸರು ಬಹಿರಂಗಪಡಿಸಬೇಕು. ಲಕ್ಷಗಟ್ಟಲೆ ಜನರನ್ನು ಬಲಿ ಪಡೆಯುವ ಜಿಹಾದಿ ಹಾಗೂ ನಕ್ಸಲರು, ಯಾವ ಗ್ರಂಥ ಓದಿದ್ದಾರೆ ಎಂಬುದನ್ನೂ ತಿಳಿಸಬೇಕು’ ಎಂದು ಚೇತನ್ ಸವಾಲು ಹಾಕಿದರು.

ADVERTISEMENT

‘ನೀನು ಕೇವಲ ಸನಾತನ ಸಂಸ್ಥೆಯ ಹೆಸರು ಹೇಳು. ನಾವು ನಿನಗೆ ₹25 ಲಕ್ಷ ಕೊಡುತ್ತೇವೆ’ ಎಂದು ಪರಶುರಾಮ್ ವಾಘ್ಮೋರೆಗೆ ಎಸ್‌ಐಟಿಯವರು ಹಣದ ಆಮಿಷವೊಡ್ಡಿದ್ದಾರೆ. ಆತ ಒಪ್ಪದಿದ್ದಾಗ, ಸಂಸ್ಥೆ ಗ್ರಂಥ ಓದಿ ಹತ್ಯೆ ಮಾಡಲಾಗಿದೆ ಎಂಬ ಸುಳ್ಳನ್ನೇ ನಿಜ ಮಾಡಲು ಪೊಲೀಸರು ಹೊರಟಿದ್ದಾರೆ’ ಎಂದು ಅವರು ದೂರಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ, ‘ಗೌರಿ ಲಂಕೇಶ್ ಹತ್ಯೆ ಆರೋಪಿ ಅಮೋಲ್ ಕಾಳೆ, ಸಂಸ್ಥೆ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಪದಾಧಿಕಾರಿಯೂ ಅಲ್ಲ’ ಎಂದು ಹೇಳಿದರು.

ವಕೀಲ ಎನ್‌.ಪಿ. ಅಮೃತೇಶ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.