ADVERTISEMENT

ತುಂಡಾಗಿದ್ದ ಮುಂಗೈ ಮತ್ತೆ ಸೇರಿತು!

ಗೌರಿಬಿದನೂರಿನ ವ್ಯಕ್ತಿಗೆ ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:50 IST
Last Updated 11 ಮೇ 2020, 19:50 IST
ತುಂಡರಿಸಿದ್ದ ಮುಂಗೈಯನ್ನು ಮರುಜೋಡಣೆ ಮಾಡಿರುವುದು
ತುಂಡರಿಸಿದ್ದ ಮುಂಗೈಯನ್ನು ಮರುಜೋಡಣೆ ಮಾಡಿರುವುದು    

ಬೆಂಗಳೂರು: ಸಂಪೂರ್ಣ ತುಂಡಾಗಿದ್ದ ಮುಂಗೈಯನ್ನು ಶಸ್ತ್ರಚಿಕಿತ್ಸೆ ಮೂಲಕ ನಗರದ ಸಂಜಯ್‌ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರದ ವೈದ್ಯರು ಜೋಡಿಸಿದ್ದಾರೆ.

ಗೌರಿಬಿದನೂರು ಬಳಿಯ ರಾಮಾಪುರದ ಹನುಮಂತ (35) ಎಂಬುವರ ಮುಂಗೈ ತುಂಡಾಗಿತ್ತು. ಘಟನೆ ನಡೆದು ಆರು ತಾಸಿನೊಳಗೆ ಆಸ್ಪತ್ರೆಗೆ ಬಂದಿದ್ದರಿಂದ ಶಸ್ತ್ರಚಿಕಿತ್ಸೆ
ನಡೆಸಲು ಸಾಧ್ಯವಾಯಿತು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ಎಸ್. ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಹೋದರನೊಂದಿಗೆ ನಡೆದ ಹೊಡೆದಾಟದಲ್ಲಿ ಹನುಮಂತನ ಮುಂಗೈ ಮತ್ತು ಕೈ ಬೇರೆ ಬೇರೆ ಆಗಿತ್ತು. ಸುಮಾರು ಐದು ತಾಸು ಶಸ್ತ್ರಚಿಕಿತ್ಸೆ ನಡೆಸಿ ಮುಂಗೈಯನ್ನು ಜೋಡಿಸಲಾಯಿತು’ ಎಂದು ಅವರು ಹೇಳಿದರು.

ADVERTISEMENT

ಚಂದ್ರಶೇಖರ್ ಅವರ ನೇತೃತ್ವದಲ್ಲಿ ಆಸ್ಪತ್ರೆಯ ‘ಪ್ಲಾಸ್ಟಿಕ್‌’ ಸರ್ಜನ್‌ಗಳಾದ ಡಾ. ಜಯನಾಥ್, ಡಾ. ಸುಹಾಸ್, ಡಾ. ಅಪರ್ಣಾ ಅವರು ಈ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಶಸ್ತ್ರಚಿಕಿತ್ಸೆ‌ ಹೇಗೆ : ರಕ್ತನಾಳಗಳನ್ನು ಮೈಕ್ರೋಸ್ಕೋಪ್‌ ಮೂಲಕ ಹೊಲೆದು ಜೋಡಿಸುವ ಈ ಶಸ್ತ್ರಚಿಕಿತ್ಸೆಗೆ ಮೈಕ್ರೊವ್ಯಾಸ್ಕಲರ್‌ ಸರ್ಜರಿ ಎನ್ನುತ್ತಾರೆ. ದೇಹದ ಅಂಗಾಂಗಗಳು ಸರಿಯಾಗಿ ತುಂಡಾದಾಗ (ಕ್ಲೀನ್‌ ಕಟ್‌) ಅಂದರೆ, ಮಚ್ಚು, ಕೊಡಲಿ, ಕುಡಗೋಲು, ಚಾಕುವಿನಿಂದ ಕೈ, ಕಾಲು, ಬೆರಳು ಕತ್ತರಿಸಿದಾಗ ಈ ಶಸ್ತ್ರಚಿಕಿತ್ಸೆಯನ್ನು ಮಾಡಬಹುದು. ಆದರೆ, ಅಪಘಾತದಲ್ಲಿ ಕಾಲು ಅಥವಾ ಕೈ ಸಂಪೂರ್ಣ ನಜ್ಜುಗುಜ್ಜಾದಂತೆ ಹಾನಿಗೀಡಾಗಿದ್ದರೆ ಈ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎನ್ನುತ್ತಾರೆ ವೈದ್ಯರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಮಾದರಿಯ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ಅಲ್ಲದೆ, ಕೋವಿಡ್‌–19 ಹರಡುತ್ತಿರುವ ಈ ಸಂದರ್ಭದಲ್ಲಿ ಯಾವ ಆಸ್ಪತ್ರೆಗಳು ಈ ಕಾರ್ಯಕ್ಕೆ ಈಗ ಕೈ ಹಾಕುತ್ತಿಲ್ಲ. ನಮ್ಮ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಇರುವುದರಿಂದ ಶಸ್ತ್ರ ಚಿಕಿತ್ಸೆ ನಡೆಸಿದೆವು’ ಎಂದು ಚಂದ್ರಶೇಖರ್‌ ಹೇಳಿದರು.

‘ಇಂತಹ ಅವಘಡ ಅಥವಾ ಅಪಘಾತವಾಗಿ ಆರು ತಾಸಿನೊಳಗೆ ರೋಗಿಯು ಆಸ್ಪತ್ರೆಗೆ ಬರಬೇಕು. ಏಕೆಂದರೆ, ತುಂಡಾದ ಅಂಗೈಯಲ್ಲಿನ ಅಂಗಾಂಶ, ಜೀವಕೋಶಗಳು ಇನ್ನೂ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುತ್ತವೆ. 6 ತಾಸು ಮೀರಿದರೆ ಇಂತಹ ಶಸ್ತ್ರಚಿಕಿತ್ಸೆ ನಡೆಸುವುದು ಕಷ್ಟವಾಗುತ್ತದೆ’ ಎಂದರು.

‘ಬೇರೆ ಆಸ್ಪತ್ರೆಗಳಲ್ಲಿ ₹3 ಲಕ್ಷದಿಂದ ₹4 ಲಕ್ಷ ಇದಕ್ಕಾಗಿ ಖರ್ಚಾಗುತ್ತಿತ್ತು. ನಾವು ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ’ ಎಂದೂ ಅವರು ತಿಳಿಸಿದರು.

‘ಆಸ್ತಿ ವಿಷಯಕ್ಕೆ ನಡೆದ ಜಗಳದಲ್ಲಿ ಸಹೋದರ ಮುಂಗೈಯನ್ನು ಆಕಸ್ಮಿಕವಾಗಿ ಕತ್ತರಿಸಿದ. ಅಣ್ಣ–ತಮ್ಮನ ಜಗಳ ಇದ್ದಿದ್ದೇ ಎನ್ನುವ ಕಾರಣದಿಂದ ಯಾವುದೇ ದೂರು ನೀಡಿಲ್ಲ. ವೈದ್ಯರು ತಕ್ಷಣಕ್ಕೆ ಸ್ಪಂದಿಸಿ, ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಕೈ ಮೊದಲಿನಂತಾಗಿದೆ’ ಎಂದು ಹನುಮಂತ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.