ADVERTISEMENT

#MeToo ಕುರಿತು ಮಾತನಾಡಿದ್ದಾರೆ ಸ್ಯಾಂಡಲ್‌ವುಡ್‌ ಕಲಾವಿದರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 16:42 IST
Last Updated 20 ಅಕ್ಟೋಬರ್ 2018, 16:42 IST
ಶ್ರುತಿ ಹರಿಹರನ್
ಶ್ರುತಿ ಹರಿಹರನ್   

ಬೆಂಗಳೂರು:ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ್ದ #MeToo ಈಗ ಸ್ಯಾಂಡಲ್‌ವುಡ್‌ನಲ್ಲೂ ಸದ್ದು ಮಾಡುತ್ತಿದೆ. ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ನಟಿ ಶ್ರುತಿ ಹರಿಹರನ್‌ ದಿಟ್ಟವಾಗಿ ಮಾತಾಡಿದ್ದಾರೆ. ಇದರಿಂದ ಚಂದನವನದಲ್ಲಿ ಒಂದಿಷ್ಟು ಚರ್ಚೆಗಳು ಕಾವು ಪಡೆದುಕೊಂಡಿವೆ.

ಅಭಿಯಾನವನ್ನು ಕೇಂದ್ರವನ್ನಾಗಿಟ್ಟುಕೊಂಡು ಸ್ಯಾಂಡಲ್‌ವುಡ್‌ ಕಲಾವಿದರು ತಮ್ಮ ಅನಿಸಿಕೆಯನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಗಟ್ಟಿಯಾಗುತ್ತಿರುವಶ್ರುತಿ ವಿರುದ್ಧದ ದನಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಭಯದ ವಾತಾವರಣ ಸೃಷ್ಟಿ

ADVERTISEMENT
ಸಂಯುಕ್ತಾ ಹೊರನಾಡು

ಪುರುಷ ಪ್ರಧಾನ ಇಂಡಸ್ಟ್ರಿ ಆಗಿರೋದ್ರಿಂದ ಅವರು ಶಾಶ್ವತವಾಗಿ ಉಳಿಯುತ್ತಾರೆ. ಒಬ್ಬನೇ ನಾಯಕನ ಸಿನಿಮಾಗಳಲ್ಲಿ ಹತ್ತಾರು ನಟಿಯರು ಬದಲಾಗುತ್ತಿರುತ್ತಾರೆ. ಹೊರಗಿನಿಂದಲೂ ನಟಿಯರನ್ನು ಕರೆಸಿಕೊಳ್ಳಲಾಗುತ್ತದೆ. ಹೀಗಾಗಿ ಸಿನಿಮಾ ಜಗತ್ತಿನಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಬೇರು ಇನ್ನೂ ಗಟ್ಟಿಯಾಗಿದೆ.

ಕಿರುಕುಳ ಪ್ರಕರಣದ ಬಗ್ಗೆ ಒಂದು ಹುಡುಗಿ (ಶೃತಿ ಹರಿಹರನ್‌) ಮಾತನಾಡಿದರೆ ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಕೆಟ್ಟದಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಬೇರೆ ಇಂಡಸ್ಟ್ರಿಗಳಲ್ಲಿ ಹೀಗಾದಾಗ ಎಲ್ಲರೂ ಬೆಂಬಲಿಸಿದ್ದರು. ನಮ್ಮಲ್ಲಿ ಹಾಗಾಗುತ್ತಿಲ್ಲ. ಜನರು ಬಾಯಿಗೆ ಬಂದಹಾಗೆ ಮಾತನಾಡುತ್ತಿರುವುದರಿಂದ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ.

ನನಗೆ ಇದುವರೆಗೂ ಇಂತಹ ಅನುಭವವಾಗಿಲ್ಲ. ಒಂದು ವೇಳೆ ಈ ರೀತಿಯಾದರೂ ಹೇಳಿಕೊಳ್ಳಲು ಭಯವಾಗುತ್ತಿದೆ. ಆದರೆ ಮೀ ಟೂ ಅಭಿಯಾನಕ್ಕೆ ನನ್ನ ಬೆಂಬಲವಿದೆ.

***

ಸೋನು ಗೌಡ

ಹೆಣ್ಣಿನ ದನಿಗೆ ಸ್ಪಂದನೆ ಅಗತ್ಯ

ಒಂದು ಹೆಣ್ಣು ತನ್ನ ಅನ್ಯಾಯದ ಕುರಿತು ಮಾತನಾಡಿದಾಗ, ಆಕೆಯದ್ದೇ ತಪ್ಪು ಎಂದೇ ಸಮಾಜ ದೂಷಿಸುತ್ತದೆ. ಇನ್ನು ನಟಿಯರಾದರೆ ಇದೊಂದು ಪಬ್ಲಿಸಿಟಿ ಗಿಮಿಕ್‌ ಎಂದೇ ಬಿಂಬಿಸುತ್ತಾರೆ. ಅದು ಹಾಗಾಗಬಾರದು.

ಒಬ್ಬ ಹುಡುಗಿ (ಶ್ರುತಿ ಹರಿಹರನ್) ತನ್ನ ಕಷ್ಟ ಹೇಳಿಕೊಂಡಾಗ ಸಮಾಜ ಅದಕ್ಕೆ ಸ್ಪಂದಿಸಬೇಕು.ಶ್ರುತಿಗೆ ನನ್ನ ಬೆಂಬಲವಿದೆ. ಆ ನಟರ (ಅರ್ಜುನ್ ಸರ್ಜಾ) ಬಗ್ಗೆ ನನಗೆ ಗೊತ್ತಿಲ್ಲ. ಅವರೊಂದಿಗೆ ನಟಿಸಿಲ್ಲ. ಆದರೆ, ಇಂಡಸ್ಟ್ರಿಯಲ್ಲಿ ಲೈಂಗಿಕ ಕಿರುಕುಳದ ಘಟನೆಗಳು ಸಾಕಷ್ಟು ನಡೆದಿವೆ. ಹಿಂದಿನಿಂದಲೂ ಇದು ಇದ್ದೇ ಇದೆ.

ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿರುವ ಸಾ.ರಾ.ಗೋವಿಂದ್‌ ಅವರ ಹೇಳಿಕೆ ನಿಜಕ್ಕೂ ಬೇಸರವಾಗಿದೆ. ಅವರ ಮನೆಯ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತಿದ್ದರೇ? ನಮ್ಮನ್ನೂ ಅವರ ಮನೆಯ ಹೆಣ್ಣು ಮಕ್ಕಳೆಂದು ಏಕೆ ನೋಡುವುದಿಲ್ಲ? ನಮ್ಮನ್ನು ಕೇವಲ ವ್ಯಾಪಾರದ ದೃಷ್ಟಿಯಿಂದ ಏಕೆ ನೋಡುತ್ತಾರೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.