ADVERTISEMENT

ಸ್ವಾರ್ಥ, ದುರಾಸೆಗೆ ಭ್ರಷ್ಟಾಚಾರ ಹೆಚ್ಚಳ: ಸಂತೋಷ್‌ ಹೆಗ್ಡೆ ಬೇಸರ

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 22:05 IST
Last Updated 4 ಸೆಪ್ಟೆಂಬರ್ 2021, 22:05 IST
ಕಾರ್ಯಕ್ರಮದಲ್ಲಿ ಎನ್‌. ಸಂತೋಷ್ ಹೆಗ್ಡೆ ಹಾಗೂ ಚಂದ್ರಶೇಖರ ಕಂಬಾರ ಅವರು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಇದ್ದರು.
ಕಾರ್ಯಕ್ರಮದಲ್ಲಿ ಎನ್‌. ಸಂತೋಷ್ ಹೆಗ್ಡೆ ಹಾಗೂ ಚಂದ್ರಶೇಖರ ಕಂಬಾರ ಅವರು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಇದ್ದರು.   

ಬೆಂಗಳೂರು:‘ಹಣ, ಅಧಿಕಾರದ ಆಸೆಗೆಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ.ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬರುವವರಿಗೆ ಭವ್ಯ ಸ್ವಾಗತ ನೀಡುವ ಪರಿಪಾಠ ಹೆಚ್ಚುತ್ತಿರುವುದು ವಿಷಾದನೀಯ. ಜನರ ಈ ಧೋರಣೆ ಬದಲಾಗಬೇಕು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್ ಹೆಗ್ಡೆ ತಿಳಿಸಿದರು.

ನಗರದಬಿಎಂಎಸ್‌ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿವಿಆರ್‌1 ಸಮೂಹ ಸಂಸ್ಥೆಯನ್ನು ಅನಾವರಣ ಮಾಡಿ, ಮಾತನಾಡಿದರು.‘ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ. ಪ್ರತಿ ಹಂತದಲ್ಲಿ ಲಂಚ ಸಾಮಾನ್ಯವಾಗಿದೆ. ಇದು ದುರದೃಷ್ಟಕರ ಸಂಗತಿ.ಜೈಲಿಗೆ ಹೋಗಿ ಜಾಮೀನು ಕೊಟ್ಟು ಬಿಡುಗಡೆಗೊಂಡವರಿಗೆ ಜೈಕಾರ ಹಾಕುವ ಜನ ನಮ್ಮಲ್ಲಿದ್ದಾರೆ. ಶಿಕ್ಷೆಯ ಭಯವಿಲ್ಲದ ಭ್ರಷ್ಟರು ಅವ್ಯಾಹತವಾಗಿ ಹಗರಣಗಳನ್ನು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜನರ‌ ಚಿಂತನೆಗಳಲ್ಲಿ ಬದಲಾವಣೆ ಬರಬೇಕು. ಇತ್ತೀಚಿನ ದಿನಗಳಲ್ಲಿ ದುರಾಸೆ ಹೆಚ್ಚಾಗಿದ್ದು, ಹಣ ಮತ್ತು ಅಧಿಕಾರದ ಹಿಂದೆ ಸಾಗುತ್ತಿದ್ದಾರೆ. ದುಡ್ಡಿದ್ದವರು ಅಧಿಕಾರ ಬೇಕು ಎನ್ನುತ್ತಾರೆ. ಅಧಿಕಾರಕ್ಕೆ ಬಂದ ‌ಬಳಿಕ ಭ್ರಷ್ಟಾಚಾರ ಮಾಡುತ್ತಾರೆ.1984ರ ಬೊಫೋರ್ಸ್ ಹಗರಣದಲ್ಲಿ ದೇಶಕ್ಕೆ ₹ 64 ಕೋಟಿ ನಷ್ಟವಾಯಿತು. 2010ರಲ್ಲಿ ನಡೆದ ಕಲ್ಲಿದ್ದಲು ಹಗರಣದ ಮೊತ್ತ ₹1,88,000 ಕೋಟಿ. ಆಡಳಿತದಲ್ಲಿರುವವರ ಸ್ವಾರ್ಥ-ದುರಾಸೆಗಳು ಇವುಗಳಿಗೆಲ್ಲಾ ಕಾರಣ’ ಎಂದು ತಿಳಿಸಿದರು.

ADVERTISEMENT

‘ಶಾಂತಿ ಮತ್ತು ಒಗ್ಗಟ್ಟಿಗೆ ಮಾನವೀಯತೆ ಸಹಕಾರಿ. ಯಾವುದೇ ಕಾರಣಕ್ಕೂ ಮಾನವೀಯತೆಯನ್ನು ನಾವು ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ವೈವಿಧ್ಯದಲ್ಲಿ ಸಾಮರಸ್ಯ:ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಮಾತನಾಡಿ, ‘ದೇಶದಲ್ಲಿ 64 ಸಾವಿರ ಜಾತಿಗಳು, 1,400ಕ್ಕೂ ಅಧಿಕ ಭಾಷೆಗಳು ಹಾಗೂ 8ಕ್ಕೂ ಅಧಿಕ ಧರ್ಮಗಳು ಇವೆ. ಇಷ್ಟೆಲ್ಲ ವೈವಿಧ್ಯವನ್ನು ಬೇರೆ ದೇಶಗಳಲ್ಲಿ ನೋಡಲು ಸಾಧ್ಯವಿಲ್ಲ. ವೈವಿಧ್ಯದೊಂದಿಗೆ ನಾವು ಒಟ್ಟಾಗಿ ಸಾಗುತ್ತಿದ್ದೇವೆ. ಜಾನಪದವು ಎಲ್ಲ ಧರ್ಮಗಳಿಂತ ಮೊದಲು ಪ್ರಪಂಚದಾದ್ಯಂತ ವ್ಯಾಪಿಸಿಕೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. ಆದರೆ, ನಂತರ ಇಲ್ಲಿಗೆ ಬಂದ ಬ್ರಿಟಿಷರು ಇತಿಹಾಸದ ಪರಿಕಲ್ಪನೆ ನೀಡಿ, ಕಾಲದ ವರ್ಗೀಕರಣ ಮಾಡಿದರು. ಇದರಿಂದಾಗಿ ನಮ್ಮದನ್ನು ಕಳೆದುಕೊಳ್ಳುತ್ತಾ ಬಂದೆವು’ ಎಂದು ಹೇಳಿದರು.

ಗಾಯಕಿಮಾನಸಿ ಪ್ರಸಾದ್, ‘ಸೃಜನಾತ್ಮಕತೆ, ಸಂವಹನ ಹಾಗೂ ಸಹಯೋಗವು ಯಶಸ್ಸು ಸಾಧಿಸಲು ಅತೀ ಮುಖ್ಯ. ದೇಶ ಪ್ರಗತಿ ಹೊಂದಲು ಕೂಡ ಈ ಮೂರು ಅಂಶಗಳು ಸಹಕಾರಿ’ ಎಂದು ತಿಳಿಸಿದರು.

ವಿಆರ್‌1 ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಎ. ರವೀಂದ್ರ ಮಾತನಾಡಿ, ‘ಸ್ವಾತಂತ್ರ್ಯೋತ್ಸವದ 75ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ಸಾಮಾಜಿಕ ಸಾಮರಸ್ಯ, ದೇಶಪ್ರೇಮ ಮತ್ತು ಉದಾರವಾದ ದೃಷ್ಟಿಕೋನವನ್ನು ಯುವಜನತೆಯಲ್ಲಿ ಬೆಳೆಸಬೇಕಿದೆ. ಈ ನಿಟ್ಟಿನಲ್ಲಿ ಸಮಾನಮನಸ್ಕರು ಕಾರ್ಯೋನ್ಮುಖರಾಗಿ ಸಮೂಹ ಸಂಸ್ಥೆ ರಚಿಸಿದ್ದೇವೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಪೋಷಿಸುವುದು ನಮ್ಮ ಉದ್ದೇಶವಾಗಿದ್ದು, ಕಾರ್ಯಾಗಾರ ಮತ್ತು ವಿಚಾರಸಂಕಿರಣಗಳ ಮೂಲಕ ಯುವಜನತೆಯನ್ನು ತಲುಪುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.