ADVERTISEMENT

ಹಂಪಿಹೊಳಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ: ಮನು ಬಳಿಗಾರ್

ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಅಭಿಮತ *ತಬಲಾ ವಾದಕ ಸತೀಶ್ ಹಂಪಿಹೊಳಿಗೆ ಅಭಿನಂದನೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 18:19 IST
Last Updated 17 ಆಗಸ್ಟ್ 2025, 18:19 IST
ಕಾರ್ಯಕ್ರಮದಲ್ಲಿ ಸತೀಶ್ ಹಂಪಿಹೊಳಿ ಅವರನ್ನು ಅಭಿನಂದಿಸಲಾಯಿತು. ರೇಖಾ ಕೆ. ಗೋವಿಂದ್, ಗೀತಾ ರಾಮಾನುಜಂ, ಶ್ರೀನಿವಾಸ್, ಮನು ಬಳಿಗಾರ್, ವೂಡೇ ಪಿ. ಕೃಷ್ಣ, ಸಂತೋಷ್ ಹೆಗ್ಡೆ, ಶ್ರೀನಿವಾಸ ಪ್ರಭು ಮತ್ತು ಮೃತ್ಯುಂಜಯ ಶೆಟ್ಟರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸತೀಶ್ ಹಂಪಿಹೊಳಿ ಅವರನ್ನು ಅಭಿನಂದಿಸಲಾಯಿತು. ರೇಖಾ ಕೆ. ಗೋವಿಂದ್, ಗೀತಾ ರಾಮಾನುಜಂ, ಶ್ರೀನಿವಾಸ್, ಮನು ಬಳಿಗಾರ್, ವೂಡೇ ಪಿ. ಕೃಷ್ಣ, ಸಂತೋಷ್ ಹೆಗ್ಡೆ, ಶ್ರೀನಿವಾಸ ಪ್ರಭು ಮತ್ತು ಮೃತ್ಯುಂಜಯ ಶೆಟ್ಟರ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ರಾಜ್ಯೋತ್ಸವ ಪ್ರಶಸ್ತಿಯ ಮಾನದಂಡದ ಪ್ರಕಾರ ಸಾಧಕರ ವಯೋಮಿತಿ 60 ವರ್ಷ ಮೇಲ್ಪಟ್ಟಿರಬೇಕು. ಈಗ ವಯೋಮಿತಿಯ ಮಾನದಂಡವನ್ನೂ ಪೂರ್ಣಗೊಳಿಸಿರುವ ಲಯ ಸಾಧಕ ಸತೀಶ್ ಹಂಪಿಹೊಳಿ ಅವರನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. 

ತಬಲಾ ವಾದಕ ಸತೀಶ್ ಹಂಪಿಹೊಳಿ ಅವರು 60 ವರ್ಷಗಳನ್ನು ಪೂರ್ಣಗೊಳಿಸಿದ ಪ್ರಯುಕ್ತ ಪಂಡಿತ್ ಸತೀಶ್ ಹಂಪಿಹೊಳಿ ಅಭಿನಂದನಾ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಲಯ ಸಾಧಕ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಸಂಗೀತ ಕ್ಷೇತ್ರದಲ್ಲಿ 40 ವರ್ಷಗಳಿಂದ ರಂಜಿಸುತ್ತಿರುವ ಸತೀಶ್ ಹಂಪಿಹೊಳಿ ಅವರು, ಅಪಾರ ಶಿಷ್ಯ ಬಳಗವನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಸಂಗೀತದಲ್ಲಿ ಅಗಾಧ ಪಾಂಡಿತ್ಯ, ವಿದ್ವತ್ತು ಹೊಂದಿರುವ ಅವರು, ಕರ್ನಾಟಕದ ಹೆಮ್ಮೆಯಾಗಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು. ಕೇಂದ್ರ ಸರ್ಕಾರ ಕೊಡಮಾಡುವ ‘ಪದ್ಮಶ್ರೀ ಪ್ರಶಸ್ತಿ’ಗೂ ಅವರು ಅರ್ಹರಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಜಿ.ಆರ್. ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ನಿರ್ದೇಶಕಿ ಗೀತಾ ರಾಮಾನುಜಂ, ‘ಸತೀಶ್ ಹಂಪಿಹೊಳಿ ಅವರು ಬದುಕಿನ ಹಲವು ಏಳು-ಬೀಳುಗಳನ್ನು ಗಟ್ಟಿಯಾಗಿ ಎದುರಿಸಿ, ಅಗಾಧವಾದ ಸಾಧನೆ ಮಾಡಿದ್ದಾರೆ. ಅವರ ಬದುಕು ಸಮಾಜಕ್ಕೆ ದೊಡ್ಡ ಸಂದೇಶ. ಸಂಗೀತದಲ್ಲಿ ಅವರ ಮಾರ್ಗದರ್ಶನ ಪಡೆಯುತ್ತಿರುವ ಪ್ರತಿಯೊಬ್ಬರೂ ಅವರ ಹಾದಿಯನ್ನು ಅನುಸರಿಸಬೇಕು’ ಎಂದರು.

ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ‘ಒಳ್ಳೆಯ ಕೆಲಸ ಮಾಡಿದವರನ್ನು ಸನ್ಮಾನಿಸುವುದು ಸಮಾಜದ ಕರ್ತವ್ಯ’ ಎಂದು ಹೇಳಿದರು. 

ಅಭಿನಂದನಾ ನುಡಿಗಳನ್ನಾಡಿದ ಕಲಾವಿದ ಶ್ರೀನಿವಾಸ ಪ್ರಭು, ‘ಸತೀಶ್ ಹಂಪಿಹೊಳಿ ಅವರು ಲಯ ವಾದ್ಯದಲ್ಲಿ ನೂರಾರು ನಡೆಗಳನ್ನು ಸುಲಲಿತವಾಗಿ ನುಡಿಸಿ, ಬೆರಗುಗೊಳಿಸುತ್ತಾರೆ. ವೃತ್ತಿ ಜೀವನದಲ್ಲಿ ಸದ್ದುಗದ್ದಲವಿಲ್ಲದೆ ತಮ್ಮಷ್ಟಕ್ಕೆ ತಾವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರೀತಿಯಿಂದ ತೊಡಗಿಕೊಂಡು, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ವಿಜಯ ಕರ್ನಾಟಕ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ಕಾರ್ತಿಕ್ ಫೌಂಡೇಷನ್ ಕಾರ್ಯದರ್ಶಿ ರೇಖಾ ಕೆ. ಗೋವಿಂದ್ ಹಾಗೂ ಹಿಂದೂಸ್ಥಾನಿ ಗಾಯಕ ಮೃತ್ಯುಂಜಯ ಶೆಟ್ಟರ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.