ADVERTISEMENT

ಎಸ್‌ಸಿ ಮೀಸಲು ಶೇ 18ಕ್ಕೆ ಏರಿಸಿ: ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 23:30 IST
Last Updated 20 ಜನವರಿ 2026, 23:30 IST
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗವು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಮನವಿ ಸಲ್ಲಿಸಿತು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನಿಯೋಗವು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಮನವಿ ಸಲ್ಲಿಸಿತು.   

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣದಲ್ಲಿ ಬಂಜಾರ, ಭೋವಿ, ಕೊರಮ, ಕೊರಚ ಮತ್ತು ಅಲೆಮಾರಿ ಸಮುದಾಯಗಳಿಗೆ ಆಗಿರುವ ಅನ್ಯಾಯ ಸರಿಪಡಿಸಲು ಮೀಸಲಾತಿ ಪ್ರಮಾಣವನ್ನು ಶೇ 18ಕ್ಕೆ ಏರಿಸಬೇಕು ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ಮನವಿ ಸಲ್ಲಿಸಿದೆ.

ಎಚ್.ಎನ್.ನಾಗಮೋಹನ್ ದಾಸ್ ಆಯೋಗ ನೀಡಿರುವ ವರದಿಯಂತೆ ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಗಳಲ್ಲಿ ಪ್ರವರ್ಗಗಳನ್ನು ಮಾಡಿ ಮೀಸಲಾತಿ ಹಂಚಲು ಮಾನದಂಡ ಅನುಸರಿಸಿಲ್ಲ. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗೆ ವ್ಯತಿರಿಕ್ತವಾಗಿ ಸರ್ಕಾರಿ ಆದೇಶದ ಮೂಲಕ ಕಾನೂನಿನ ರೂಪ ನೀಡಲು ಹೊರಟಿರುವುದಕ್ಕೆ ನಮ್ಮ ವಿರೋಧವಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಬಿ. ಟಿ. ಲಲಿತಾ ನಾಯಕ್‌, ಮಾಜಿ ಸಂಸದ ಜನಾರ್ದನ ಸ್ವಾಮಿ, ಮಾಜಿ ಶಾಸಕರಾದ ಭೀಮಾ ನಾಯ್ಕ, ಬಸವರಾಜ್ ನಾಯ್ಕ, ಜಲಜಾ ನಾಯ್ಕ, ನಿವೃತ್ತ ಐಎಎಸ್‌ ಅಧಿಕಾರಿ ಮಂಜುನಾಥ ಪ್ರಸಾದ್, ವಕೀಲರಾದ ಶಂಕರಪ್ಪ, ಎನ್.ಅನಂತನಾಯ್ಕ  ಉಪಸ್ಥಿತರಿದ್ದರು.

ADVERTISEMENT

ಬೇಡಿಕೆಗಳೇನು?:

ಪ್ರರ್ಗ-ಸಿ ಗುಂಪಿನ 63 ಸಮುದಾಯಗಳ ಮೀಸಲಾತಿ ಪ್ರಮಾಣ ಶೇ 6ಕ್ಕೆ ಹೆಚ್ಚಿಸಬೇಕು. ಅಲೆಮಾರಿ, ಸೂಕ್ಷ್ಮ ಸಮುದಾಯಗಳಿಗೆ ಪ್ರತ್ಯೇಕ ಶೇ 1 ಮೀಸಲಾತಿ ಒದಗಿಸಬೇಕು. ಪ್ರವರ್ಗ-ಸಿ ಗುಂಪನ್ನು ಬದಲಾಯಿಸಿ ಪ್ರವರ್ಗ-1 ಎಂದು ಮರು ಸಂಯೋಜನೆ ಮಾಡಬೇಕು. ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣ ಕನಿಷ್ಠ ಶೇ 18ಕ್ಕೆ ಹೆಚ್ಚಿಸಿ ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಲ್ಲಿ ನೇಮಕ ಮತ್ತು ಶೈಕ್ಷಣಿಕ ಪ್ರವೇಶ ಪ್ರಕ್ರಿಯೆ ಆದೇಶ ವಾಪಸ್‌ ಪಡೆದು ಹೊಸ ನಿಯಮ ರೂಪಿಸಬೇಕು. ಅಲ್ಲಿಯವರೆಗೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಹಳೆಯ ನಿಯಮಗಳಂತೆ ಮುಂದುವರಿಸಬೇಕು.

ಎಸ್.ಸಿ.ಪಿ, ಟಿ.ಎಸ್.ಪಿ, ಯೋಜನೆಯ ಅನುದಾನ ಹಂಚಿಕೆ ನಿಯಮದಂತೆ ಪ್ರವರ್ಗ ಸಿ ಗುಂಪಿನಡಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ-ವಡ್ಡರ್ ಅಭಿವೃದ್ಧಿ ನಿಗಮ ಮತ್ತು ಅಲೆಮಾರಿ ಅಭಿವೃದ್ಧಿ ನಿಗಮಗಳಿಗೆ ಶೇ 6ರಷ್ಟು ಹಂಚಿಕೆ ಮಾಡಲು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.