ಬೆಂಗಳೂರು: ‘ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದವರಿಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಒದಗಿಸುವ ಪ್ರಕ್ರಿಯೆಯನ್ನು ಸರಳೀಕರಣ ಗೊಳಿಸಲಾಗುವುದು. ಈ ಸಂಬಂಧ ಸುತ್ತೋಲೆ ಹೊರಡಿಸುತ್ತೇವೆ’ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಭರವಸೆ ನೀಡಿದರು.
ಎಸ್.ಸಿ.ಎಸ್.ಎ/ಟಿ.ಎಸ್.ಎ ಜಾಗೃತಿ ವೇದಿಕೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ, ಎಸ್‌ಸಿ–ಎಸ್‌ಟಿ ಸಮುದಾಯದ ಪ್ರಮುಖರ ಅಹವಾಲು ಆಲಿಸಿದರು. ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಇರುವ ತೊಡಕಿನ ನಿವಾರಣೆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ‘ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ತಹಶೀಲ್ದಾರ್‌ಗಳಿಗೆ ಸರ್ಕಾರದ ಆದೇಶಗಳು ಹಾಗೂ ನ್ಯಾಯಾಲಯಗಳ ಮಾರ್ಗಸೂಚಿಗಳ ಬಗ್ಗೆ ತರಬೇತಿ ನೀಡಬೇಕಿದೆ. ಈ ಬಗ್ಗೆ ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸಿ, ಸರಳವಾಗಿ ಜಾತಿ ಪ್ರಮಾಣ ಪತ್ರ ಒದಗಿಸಲು ಸುತ್ತೋಲೆ ಹೊರಡಿಸಲಾಗುವುದು’ ಎಂದರು.
ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ‘ಶಾಲಾ ವರ್ಗಾವಣೆ ಪ್ರಮಾಣಪತ್ರ ಇಲ್ಲದ ಅಥವಾ ಶಿಕ್ಷಣ ಪಡೆಯದ ಎಸ್‌ಸಿ–ಎಸ್‌ಟಿ ಸಮುದಾಯದವರಿಗೆ ಸ್ಥಳ ಮಹಜರು ಮಾಡಬೇಕು. ಜಾತಿಯ ಬಗ್ಗೆ ಮಾಹಿತಿ ಪಡೆಯುವ ಮೂಲಕ ಪ್ರಮಾಣ ಪತ್ರವನ್ನು ನೀಡಬೇಕು. ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅನ್ಯ ರಾಜ್ಯದವರಾಗಿದ್ದರೇ ಅಲ್ಲಿನ ಜಾತಿ ಹಿನ್ನೆಲೆಯನ್ನು ಪರಿಶೀಲಿಸಿ, ಪ್ರಮಾಣ ಪತ್ರ ನೀಡಲಾಗುವುದು’ ಎಂದರು.
ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ, ‘ರಾಜ್ಯದಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವುದು ಕ್ಲಿಷ್ಟಕರವಾಗಿದೆ. ಜಾತಿಯ ಗುರುತಿನ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ. ಒಂಟಿ ಮಹಿಳೆಯರ ಸಮಸ್ಯೆ ಪರಿಹಾರಕ್ಕೆ ಕಂದಾಯ ಅಧಿಕಾರಿಗಳು ಸ್ಥಳ ಮಹಜರು ಮಾಡಿ, ಪರಿಹಾರ ಒದಗಿಸಬೇಕು. ಎಸ್‌ಸಿ–ಎಸ್‌ಟಿ ಜನರ ಸರ್ವತೋಮುಖ ಅಭಿವೃದ್ಧಿಗೆ ಜಾತಿ ಪ್ರಮಾಣ ಪತ್ರ ಅಗತ್ಯ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.