ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್ಟಿ) ಮೀಸಲಾತಿ ಪ್ರಮಾಣ ಹೆಚ್ಚಳ ರಕ್ಷಿಸಿಕೊಳ್ಳಲು ಸರ್ಕಾರವು ತಮಿಳುನಾಡು ಮಾದರಿ ಅನುಸರಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ–ಕರ್ನಾಟಕ ಆಗ್ರಹಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ, ‘ಬಿಜೆಪಿ ಸರ್ಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ ಶೇ 24ಕ್ಕೆ ಏರಿಕೆ ಮಾಡಿತ್ತು. ಇದರಿಂದ ಒಟ್ಟಾರೆ ಜಾತಿ ಆಧಾರಿತ ಮೀಸಲಾತಿ ಪ್ರಮಾಣ ಶೇ 50ರಿಂದ ಶೇ 56ಕ್ಕೆ ಏರಿಕೆಯಾಗಿತ್ತು. ಆದರೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೀಸಲಾತಿ ಏರಿಕೆಯನ್ನು ರದ್ದುಪಡಿಸಿದ್ದು, ದಲಿತರಿಗೆ ಅನ್ಯಾಯವಾಗಿದೆ’ ಎಂದರು.
‘ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ 69ಕ್ಕೆ ಹೆಚ್ಚಿಸಿದ್ದನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಲಾಗಿದೆ. ಈ ಮೂಲಕ ಕಾಯ್ದೆಯ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಯಾರೂ ಪ್ರಶ್ನಿಸದಂತೆ ಮಾಡಲಾಗಿದೆ. ಇದು ರಾಜ್ಯಗಳಿಗೂ ಮಾದರಿ. ರಾಜ್ಯದ ಕಾಂಗ್ರೆಸ್ ಸರ್ಕಾರವೂ ಈ ಪ್ರಯತ್ನ ಮಾಡಬೇಕು. ಬಿಜೆಪಿ ಸಂಸದರು ಈ ವಿಚಾರದಲ್ಲಿ ಬೆಂಬಲಿಸಬೇಕು’ ಎಂದು ಒತ್ತಾಯಿಸಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನುಗಳ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಯ ಕಲಂ 3 (1)(ಬಿ) ರಲ್ಲಿ ‘ಗ್ರ್ಯಾಂಟೆಂಡ್ ಲ್ಯಾಂಡ್’ ಎಂಬ ಪದ ಬಳಸಲಾಗಿದೆ. ಇದರಿಂದ ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಪರಿಶಿಷ್ಟ ಗೇಣಿದಾರರ ವಿಚಾರದಲ್ಲಿ ಅನಿರೀಕ್ಷಿತ ತೀರ್ಪುಗಳು ಬಂದಿವೆ. ಒಂದೇ ಕಾಯ್ದೆಯಲ್ಲಿ ಎರಡೂ ಪದ ಬಳಕೆ ಆಗಿರುವುದರಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ‘ಗ್ರ್ಯಾಂಟೆಂಡ್ ಲ್ಯಾಂಡ್’ ಪದ ಕೈಬಿಟ್ಟು, ಅದರ ಬದಲು ಪಿಟಿಸಿಎಲ್ ಕಾಯ್ದೆಯ ಮುಖ್ಯಾಂಶದಲ್ಲಿ ಬಳಸಲಾದ ‘ಸರ್ಟನ್ ಲ್ಯಾಂಡ್’ ಎಂಬ ಪದ ಮಾತ್ರ ಉಳಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.