ADVERTISEMENT

ಎಂಜಿನಿಯರ್‌ಗಳ ಬಡ್ತಿ ಹಿಂಪಡೆಯಲು ಬಿಬಿಎಂಪಿಗೆ ‘ಸುಪ್ರೀಂ’ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 22:13 IST
Last Updated 10 ಮಾರ್ಚ್ 2020, 22:13 IST
   

ನವದೆಹಲಿ: ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದ ಮುಚ್ಚಳಿಕೆ ಉಲ್ಲಂಘಿಸಿ ಕಿರಿಯ ಎಂಜಿನಿಯರ್‌ಗಳಿಗೆ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹುದ್ದೆಗೆ ಬಡ್ತಿ ನೀಡಿರುವ ಆದೇಶ ಹಿಂಪಡೆಯುವಂತೆ ಬಿಬಿಎಂಪಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಹೈಕೋರ್ಟ್‌ನ ಮಧ್ಯಂತರ ತೀರ್ಪು ಉಲ್ಲಂಘಿಸಿದ ಬಗ್ಗೆ ಬೇಷರತ್‌ ಕ್ಷಮೆಯಾಚಿಸಿದ ಕಾರಣ ಬಿಬಿಎಂಪಿಯ ಹಿಂದಿನ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಹಾಗೂ ಇತರರ ವಿರುದ್ಧ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಯು.ಯು.ಲಲಿತ್‌, ಇಂದೂ ಮಲ್ಹೋತ್ರಾ ಹಾಗೂ ಹೇಮಂತ್‌ ಗುಪ್ತಾ ಅವರಿದ್ದ ನ್ಯಾಯಪೀಠ ಇತ್ಯರ್ಥಗೊಳಿಸಿತು.

ಹೈಕೋರ್ಟ್‌ ಆದೇಶ ಉಲ್ಲಂಘಿಸಿ ಬಡ್ತಿ ಪಡೆದ ಅಧಿಕಾರಿಗಳನ್ನು ಮತ್ತೆ ಅವರ ಮೂಲ ಹುದ್ದೆಗೆ ಕಳುಹಿಸಬೇಕು ಎಂದು ನ್ಯಾಯಪೀಠ ಆದೇಶಿಸಿತು. ಈವರೆಗೆ ಪಡೆದ ವಿತ್ತೀಯ ಲಾಭ ಅಥವಾ ಸಂಬಳವನ್ನು ಮರಳಿ ಪಡೆಯಲು ಯಾವುದೇ ಕ್ರಮವನ್ನು ಆರಂಭಿಸಬಾರದು ಎಂದೂ ನ್ಯಾಯಪೀಠ ಹೇಳಿದೆ.

ADVERTISEMENT

ಹೈಕೋರ್ಟ್‌ ಮಧ್ಯಂತರ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ, ಬಿಬಿಎಂಪಿ 2018ರ ಜುಲೈ 12 ಮತ್ತು ಜುಲೈ 30 ರಂದು ಬಡ್ತಿ ನೀಡಿ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.