ADVERTISEMENT

ಠಾಣೆ ಭೇಟಿಗೆ ವೇಳಾಪಟ್ಟಿ: ಕಮಿಷನರ್ ನಡೆಗೆ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 16:02 IST
Last Updated 27 ಜನವರಿ 2024, 16:02 IST
ಬಿ. ದಯಾನಂದ್
ಬಿ. ದಯಾನಂದ್   

ಬೆಂಗಳೂರು: ನಗರದ ಪೊಲೀಸ್ ಠಾಣೆಗಳು ಹಾಗೂ ಉಪ ವಿಭಾಗಗಳ ಕಚೇರಿಗಳಿಗೆ ಭೇಟಿ ನೀಡಲು ದಿನಗಳನ್ನು ನಿಗದಿಪಡಿಸಿ ಕಮಿಷನರ್ ಬಿ. ದಯಾನಂದ್ ಅವರು ವೇಳಾಪಟ್ಟಿ ಬಿಡುಗಡೆ ಮಾಡಿದ್ದಾರೆ.

ಕಮಿಷನರ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವ ಸಾರ್ವಜನಿಕರು, ‘ಕಮಿಷನರ್‌ ಅವರು ಠಾಣೆಗಳಿಗೆ ದಿಢೀರ್ ಭೇಟಿ ನೀಡಿದರೆ, ಅಲ್ಲಿಯ ಅವ್ಯವಸ್ಥೆ ಕಣ್ಣಿಗೆ ಕಾಣುತ್ತದೆ. ಭೇಟಿ ದಿನಾಂಕ ನಿಗದಿಪಡಿಸಿದರೆ, ಪೊಲೀಸರು ಎಚ್ಚೆತ್ತುಕೊಳ್ಳುತ್ತಾರೆ. ಇದರಿಂದ ಠಾಣೆ ವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಹಲವು ಠಾಣೆಗಳಲ್ಲಿ ಜನಸ್ನೇಹಿ ವ್ಯವಸ್ಥೆ ಇಲ್ಲ. ದೂರುದಾರರನ್ನೂ ಆರೋಪಿಗಳ ರೀತಿಯಲ್ಲಿ ನೋಡಲಾಗುತ್ತಿದೆ. ಕೆಲ ಠಾಣೆಗಳಲ್ಲಿ ಭ್ರಷ್ಟಾಚಾರವೂ ವಿಪರೀತವಾಗಿದೆ. ಇದರಿಂದಾಗಿ ಹಲವು ಜನರು ಠಾಣೆಗೆ ಹೋಗಲು ಹೆದರುತ್ತಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ಪೊಲೀಸರ ಕೆಲಸದ ಬಗ್ಗೆ ಕಮಿಷನರ್ ಅವರು ಪರಿಶೀಲನೆ ನಡೆಸುವುದು ಉತ್ತಮ ಬೆಳವಣಿಗೆ. ಆದರೆ, ಅವರ ಭೇಟಿ ದಿಢೀರ್ ಆಗಿರಬೇಕು. ಆಗ ಮಾತ್ರ ಪೊಲೀಸರ ತಪ್ಪುಗಳನ್ನು ಪತ್ತೆ ಮಾಡಿ, ಶಿಸ್ತುಕ್ರಮ ಜರುಗಿಸಬಹುದು. ಮೊದಲೇ ದಿನ ತಿಳಿಸಿ ಠಾಣೆಗೆ ಹೋದರೆ, ಪೊಲೀಸರಿಗೆ ಅನುಕೂಲ ಹೆಚ್ಚು’ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಕಮಿಷನರ್ ದಯಾನಂದ್ ಅವರು ಆರಂಭದಲ್ಲಿ ಠಾಣೆಗಳಿಗೆ ದಿಢೀರ್ ಭೇಟಿ ನೀಡುತ್ತಿದ್ದರು. ಕರ್ತವ್ಯಲೋಪ ಎಸಗಿದ್ದ ಪೊಲೀಸರ ವಿರುದ್ಧ ಇಲಾಖೆ ಕ್ರಮ ಜರುಗಿಸಿದ್ದರು. ಆದರೆ, ಈಗ ಅವರೇ ದಿನ ನಿಗದಿಪಡಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಮಿಷನರ್ ಅವರು ವೇಳಾಪಟ್ಟಿ ಹಿಂಪಡೆಯಬೇಕು. ದಿಢೀರ್ ಭೇಟಿ ಮುಂದುವರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.