ADVERTISEMENT

ರಸ್ತೆ ಬದಿ ಶಾಲಾ ಬಸ್‌ ನಿಲುಗಡೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 21:34 IST
Last Updated 6 ಡಿಸೆಂಬರ್ 2022, 21:34 IST
ಶಾಲಾ ಬಸ್‌ಗಳ ಸಂಚಾರ (ಸಂಗ್ರಹ ಚಿತ್ರ)
ಶಾಲಾ ಬಸ್‌ಗಳ ಸಂಚಾರ (ಸಂಗ್ರಹ ಚಿತ್ರ)   

ಪ್ರಜಾವಾಣಿ ವಾರ್ತೆ

ಬೆಂಗಳೂರು: ರೆಸಿಡೆನ್ಸಿ ರಸ್ತೆಯ ಸುತ್ತಮುತ್ತ ಬೆಳಿಗ್ಗೆ 8.30ರ ಬಳಿಕ ಶಾಲಾ ಬಸ್‌ಗಳನ್ನು ರಸ್ತೆಬದಿಯಲ್ಲಿ ನಿಲುಗಡೆ ಮಾಡದಂತೆ ಸಂಚಾರ ಪೊಲೀಸರು ನಿರ್ಬಂಧಿಸಿದ್ದಾರೆ.

ಈ ಮಾರ್ಗದಲ್ಲಿ ಬಿಷಪ್‌ ಕಾಟನ್‌ ಬಾಲಕರ– ಬಾಲಕಿಯರ ಶಾಲೆ, ಸೇಕ್ರೆಡ್ ಹಾರ್ಟ್‌ ಶಾಲೆಯ ಬಳಿ ವಿದ್ಯಾರ್ಥಿ
ಗಳನ್ನು ಬಿಡಲು ಬರುವ ಶಾಲಾ ಬಸ್‌ಗಳು ಸಂಜೆವರೆಗೂ ರಸ್ತೆಯ ಬದಿಯಲ್ಲೇ ನಿಲ್ಲುತ್ತಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ಈಗ ಪೋಷಕರ ವಾಹನಗಳನ್ನು ಶಾಲಾ ಆವರಣಕ್ಕೆ ಬಿಡಲು ಶಾಲಾ ಆಡಳಿತ ಮಂಡಳಿ ಒಪ್ಪಿದ್ದು ಮೈದಾನಕ್ಕೆ ವಾಹನಗಳು ಪ್ರವೇಶಿಸುತ್ತಿವೆ.
ಅದರ ಜತೆಗೆ ಶಾಲಾ ಬಸ್‌ಗಳು ರಸ್ತೆಬದಿಯಲ್ಲಿ ನಿಲುಗಡೆ ಮಾಡದಂತೆ ಪೊಲೀಸರು ಸೂಚಿಸಿದ್ದಾರೆ.

‘ರೆಸಿಡೆನ್ಸ್‌ ರಸ್ತೆಯಲ್ಲಿ ಸಮಸ್ಯೆ ತೀವ್ರವಾಗಿತ್ತು. ಶಾಲಾ ಬಸ್‌ಗಳು ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡುತ್ತಿದ್ದರಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗಿತ್ತು. ಅಲ್ಲಿ
ನಿರ್ಬಂಧ ಹೇರಲಾಗಿದೆ. ಮುಂದೆ ನಗರದಾದ್ಯಂತ ಈ ಕ್ರಮ ಜಾರಿಗೆ ತರಲಾಗುವುದು’ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.

ನಗರದ ಕೆಲವು ಶಾಲೆಗಳು
ರಸ್ತೆಬದಿಯಲ್ಲಿದ್ದು ಶಾಲಾ ಮಕ್ಕಳನ್ನು ಬಿಡುವಾಗ ಹಾಗೂ ಬಸ್‌ಗೆ ಹತ್ತಿಸಿಕೊಳ್ಳುವಾಗ ವಾಹನ ದಟ್ಟಣೆಯಾಗುತ್ತಿದೆ. ಅಂತಹ ಶಾಲೆ ಗುರುತಿಸಿ, ಪೋಷಕರ ವಾಹನಕ್ಕೆ ಆಗಮನ ಹಾಗೂ
ನಿರ್ಗಮನ ದ್ವಾರ ನಿರ್ಮಿಸುವಂತೆ ಸೂಚನೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.