ADVERTISEMENT

ನಗರದ ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ

ನಗರದಲ್ಲಿ ಶೇ 30ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಹಾಜರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 16:56 IST
Last Updated 6 ಸೆಪ್ಟೆಂಬರ್ 2021, 16:56 IST
ನಗರದ ಹನುಮಂತನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ರಂಗೋಲಿ ಹಾಕಿದರು ಪ್ರಜಾವಾಣಿ ಚಿತ್ರ 
ನಗರದ ಹನುಮಂತನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ರಂಗೋಲಿ ಹಾಕಿದರು ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದ ಶಾಲೆಗಳ ಆವರಣಗಳು ತಳಿರು–ತೋರಣ, ರಂಗೋಲಿಯಿಂದ ಕಂಗೊಳಿಸಿದವು. ಒಂದೂವರೆ ವರ್ಷಗಳ ನಂತರ ಶಾಲೆಗಳಲ್ಲಿ ಮಕ್ಕಳ ಕಲರವ ಕೇಳಿ ಬಂತು. ಈ ಶೈಕ್ಷಣಿಕ ವರ್ಷದಲ್ಲಿ 6,7 ಮತ್ತು 8ನೇ ತರಗತಿಯ ಮಕ್ಕಳು ಶಾಲೆಗೆ ಹಾಜರಾದರು.

‘ಗೆಳೆಯರ ಜತೆಯಲ್ಲಿ ಕುಣಿಕುಣಿದು, ಬೆಳೆಯುವ ಸೊಗಸಿನ ಕಾಲವಿದು’ ಎನ್ನುವ ಸಡಗರದಲ್ಲಿ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದರು. ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡರೆ ಹೇಗೋ, ಏನೋ ಎಂಬ ಆತಂಕದಲ್ಲಿಯೇ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರು.

ನಗರದ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಖಾಸಗಿ ಶಾಲೆಗಳ ಅನೇಕ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿಯೇ ತರಗತಿ ಹಾಜರಾದರು.

ADVERTISEMENT

ಹೂವು ನೀಡಿ ಸ್ವಾಗತ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹೂ, ಸಿಹಿ ನೀಡಿ ಬರ ಮಾಡಿಕೊಳ್ಳುವ ದೃಶ್ಯ ಕಂಡು ಬಂತು. ವಿದ್ಯಾರ್ಥಿನಿಯರು ಶಾಲೆಯ ಆವರಣವನ್ನು ರಂಗೋಲಿಯಿಂದ ಚೆಂದಗೊಳಿಸಿದ್ದರು. ಮೊದಲ ದಿನ ಪುನಶ್ಚೇತನ ಬೋಧನೆಗೆ ಆದ್ಯತೆ ನೀಡಲಾಗಿತ್ತು. ಬೆಳಿಗ್ಗೆ 9.30ರಿಂದ 1.30ರವರೆಗೆ ಮಾತ್ರ ತರಗತಿಗಳು ನಡೆದವು.

ಸುರಕ್ಷತೆಗೆ ಆದ್ಯತೆ

ಶಾಲೆಗಳನ್ನು ಸ್ಯಾನಿಟೈಸ್‌ ಮಾಡಲಾಗಿತ್ತು.ಪರಸ್ಪರ ಅಂತರ ಸಾಧ್ಯವಾಗುವಂತೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಶಾಲೆಗೆ ಬಂದ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಿ,ತರಗತಿಗೆ ಕಳಿಸಲಾಯಿತು. ಪೋಷಕರು ಅನುಮತಿ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು.

‘ವಿದ್ಯಾರ್ಥಿಗಳ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೋಷಕರು ಯಾವುದೇ ಆತಂಕವಿಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸಿಕೊಡಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ಹೇಳಿದರು.

‘ಶಿಕ್ಷಕರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ. ಮಕ್ಕಳಿಗೆ ಮನೆಯಿಂದಲೇ ಬಿಸಿ ನೀರು ತರಲು ಹೇಳಲಾಗಿದೆ. ಮಾಸ್ಕ್ ಧರಿಸುವಂತೆ, ಅಂತರ ಕಾಪಾಡುವಂತೆ ಮಕ್ಕಳಿಗೆ ತಿಳಿ ಹೇಳಲಾಗುವುದು. ಇಲಾಖೆ ನೀಡಿರುವ ಪಠ್ಯ ಪುಸ್ತಕ ನೀಡುತ್ತಿದ್ದೇವೆ. ಮತ್ತೆ ಭೌತಿಕ ತರಗತಿಗಳು ನಡೆಯುತ್ತಿರುವುದಕ್ಕೆ ಶಿಕ್ಷಕ ವರ್ಗ ಮತ್ತು ಮಕ್ಕಳು ಸಂತಸ ವ್ಯಕ್ತಪಡಿಸಿದ್ದಾರೆ’ ಎಂದು ಶಿಕ್ಷಕಿ ಜಯಶ್ರೀ ಹೇಳಿದರು.

ಶಿಕ್ಷಕರ ದಿನ ಆಚರಣೆ

ಸೆ.5ರಂದು ರಜೆ ಇದ್ದುದರಿಂದ, ಸೋಮವಾರವೇ ಶಾಲೆಗಳಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂವು ನೀಡಿ ಶುಭ ಕೋರಿದರು. ಗುರುಗಳ ಆಶೀರ್ವಾದ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.