ADVERTISEMENT

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ದಸಂಸ ಒತ್ತಾಯ

ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 20:07 IST
Last Updated 14 ಸೆಪ್ಟೆಂಬರ್ 2019, 20:07 IST

ಬೆಂಗಳೂರು: ಪರಿಶಿಷ್ಟ ಜಾತಿಗೆ ಶೇ 18 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಮೀಸಲಾತಿ ನಿಗದಿ ಮಾಡುವಂತೆ ಸರ್ಕಾರಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ‘ಸಂವಿಧಾನ ರಚನೆ ವೇಳೆಯಲ್ಲೇ ಶೋಷಿತ ಸಮುದಾಯಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಆದರೆ, ಆಡಳಿತ ಪಕ್ಷಗಳು ಮೀಸಲಾತಿ ಜಾರಿಗೊಳಿಸದೆ ಅನ್ಯಾಯ ಮಾಡಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂದು ಸಂವಿಧಾನದ ಅನುಚ್ಛೇದ 16(4) ಅಡಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆದರೆ, ಸರ್ಕಾರದ ಕೆಲ ವೃಂದಗಳಲ್ಲಿ ಈಪ್ರಮಾಣದ ಮೀಸಲಾತಿ ಇನ್ನೂ ಜಾರಿಯಾಗಿಲ್ಲ.

ADVERTISEMENT

ಸಮುದಾಯದ ಜನಸಂಖ್ಯೆ ಪ್ರಮಾಣ ಏರಿಕೆಯಾಗಿದ್ದು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿಎಸ್‌ಸಿ ಸಮುದಾಯದ ಜನಸಂಖ್ಯೆ ಶೇ 18 ಹಾಗೂ ಎಸ್‌ಟಿ ಜನಸಂಖ್ಯೆ ಶೇ 7ರಷ್ಟಿದೆ. ಹೀಗಾಗಿ ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಎರಡೂ ಸಮುದಾಯದ ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಒದಗಿಸಬೇಕು’.

‘ಹೊಸದಾಗಿ ರಚನೆ ಮಾಡುತ್ತಿರುವ ಸಮಿತಿಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಅವರನ್ನು ಮುಂದುವರಿಸಬೇಕು. ಕಾಲಮಿತಿಯೊಳಗೆ ವರದಿ ತಯಾರಿಸಿ ನಾಲ್ಕು ತಿಂಗಳ ಒಳಗೆ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಅಧಿಕೃತವಾಗಿ ಪ‍್ರಕಟಿಸಬೇಕೆಂದು’ ಒತ್ತಾಯಿಸಿದರು.

ಸಮಿತಿಯ ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ಆರ್‌.ವೆಂಕಟೇಶ್‌, ಕ್ಯಾಲಸನಹಳ್ಳಿ ಶ್ರೀನಿವಾಸ್‌, ಆನೇಕಲ್‌ ವೆಂಕಟೇಶ್‌ ಮೂರ್ತಿ, ಉಮಾಶಂಕರ್‌ ಪುನುಗುಮಾರನಹಳ್ಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.