ADVERTISEMENT

ಹತ್ಯೆ: ಚಾರ್ಮಾಡಿ ಘಾಟಿಯಲ್ಲಿ ಎಚ್‌. ಶರತ್‌ ಮೃತದೇಹಕ್ಕಾಗಿ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 21:06 IST
Last Updated 3 ಜನವರಿ 2023, 21:06 IST
   

ಉಜಿರೆ/ಬೆಂಗಳೂರು: ಕೋಣನಕುಂಟೆಯ ಹರಿನಗರ ನಿವಾಸಿ ಎಚ್‌. ಶರತ್‌ ಅವರನ್ನು ಅಪಹರಿಸಿ ಹತ್ಯೆ ಮಾಡಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು, ಮೃತದೇಹಕ್ಕಾಗಿ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದ್ದಾರೆ.

‘ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಕಾರು ಕೊಡಿಸುವುದಾಗಿ ಹೇಳಿದ್ದ ಶರತ್, ಚಿಕ್ಕಬಳ್ಳಾಪುರ ಹಾಗೂ ಯಲಹಂಕದ ಹಲವರಿಂದ ಹಣ ಪಡೆದಿದ್ದರು. ಕಾರು ಕೊಡಿಸದೇ ಜನರನ್ನು ವಂಚಿಸಿದ್ದರು. ಈ ಸಂಬಂಧ ಶರತ್ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಇದರ ನಡುವೆಯೇ ಶರತ್‌ ಅವರನ್ನು ಅಪಹರಿಸಿದ್ದ ಆರೋಪಿಗಳು, ಹತ್ಯೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಅಪಹರಣ ಹಾಗೂ ಹತ್ಯೆ ಸಂಬಂಧ ದಾಖಲಾದ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳಾದ ಎಚ್.ಜಿ. ವೆಂಕಟಾಚಲಪತಿ, ಅವರ ಪುತ್ರ ಎ.ವಿ.ಶರತ್ ಕುಮಾರ್, ಸಹಚರರಾದ ಆರ್.ಶ್ರೀಧರ್, ಕೆ. ಧನುಷ್, ಯಲಹಂಕದ ಎಂ.ಪಿ.ಮಂಜುನಾಥ್, ಉದಯ, ನವೀನ್, ಸಂಕೇತ್, ಭೋಗೇಶ್, ಗೋವಿಂದ್ ಅವರನ್ನು ಬಂಧಿಸಲಾಗಿತ್ತು. ಶರತ್‌ ಅವರನ್ನು ಕೊಂದಿರುವುದಾಗಿ ಹೇಳಿದ್ದ ಆರೋಪಿಗಳು, ಚಾರ್ಮಾಡಿ ಘಾಟಿಯಲ್ಲಿ ಮೃತದೇಹ ಬಿಸಾಕಿರುವುದಾಗಿ ಮಾಹಿತಿ ನೀಡಿದ್ದರು.’

ADVERTISEMENT

ಮೃತದೇಹ ಸಿಗುವುದು ಅನುಮಾನ: ಚಾರ್ಮಾಟಿ ಘಾಟಿಗೆ ಹೋಗಿರುವ ಪೊಲೀಸರ ತಂಡ, ರಸ್ತೆಯ ಅಕ್ಕ–ಪಕ್ಕದ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸುತ್ತಿದೆ. 9 ತಿಂಗಳ ಹಿಂದೆಯೇ ಹತ್ಯೆ ಮಾಡಿ, ಮೃತದೇಹವನ್ನು ಎಸೆಯಲಾಗಿದೆ. ಸದ್ಯದ ಸ್ಥಿತಿಯಲ್ಲಿ ಮೃತದೇಹ ಸಿಗುವುದು ಅನುಮಾನವೆಂದು ಸ್ಥಳೀಯರು ಹೇಳುತ್ತಿದ್ದಾರೆ.

‘ಚಾರ್ಮಾಡಿ ಘಾಟಿ ಸಾಕಷ್ಟು ಕಣಿವೆ ಪ್ರದೇಶದಲ್ಲಿದೆ. ಘಾಟಿಯ ಸ್ಥಳಗಳಲ್ಲಿ ವಿಪರೀತ ಪೊದೆ ಹಾಗೂ ಆಳವಾದ ಕಂದಕಗಳಿವೆ. ಮಳೆ ಸುರಿಯುವ ವೇಳೆಯಲ್ಲಿ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರಬಹುದು. ಅರಣ್ಯದಲ್ಲಿ ವನ್ಯಮೃಗಗಳಿದ್ದು, ಮೃತದೇಹ ತಿಂದು ಹಾಕಿರಬಹುದು’ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.