ADVERTISEMENT

ಸಾಮಾಜಿಕ ಬೇಡಿ ಕಳಚಿ ಹೊರಬನ್ನಿ

ವಿಚಾರ ಸಂಕಿರಣದಲ್ಲಿ ವಿಜ್ಞಾನಿ ಜಯಂತಮೂರ್ತಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 20:05 IST
Last Updated 4 ಮೇ 2019, 20:05 IST
ವಿಚಾರ ಸಂಕಿರಣದಲ್ಲಿ (ಎಡದಿಂದ) ಪ್ರಜ್ವಲ್ ಶಾಸ್ತ್ರಿ, ಸುಮಿತಾ ಸೂರ್ಯ, ಎಸ್. ಚಟರ್ಜಿ, ಸುಧಾ ಕಾಮತ್, ಜ್ಯೋತ್ನ್ಸಾ ದೀಕ್ಷಿತ್ ಮತ್ತು ಜಿ.ಸತೀಶ್ ಕುಮಾರ್ ಇದ್ದಾರೆ–ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ (ಎಡದಿಂದ) ಪ್ರಜ್ವಲ್ ಶಾಸ್ತ್ರಿ, ಸುಮಿತಾ ಸೂರ್ಯ, ಎಸ್. ಚಟರ್ಜಿ, ಸುಧಾ ಕಾಮತ್, ಜ್ಯೋತ್ನ್ಸಾ ದೀಕ್ಷಿತ್ ಮತ್ತು ಜಿ.ಸತೀಶ್ ಕುಮಾರ್ ಇದ್ದಾರೆ–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಭಾರತದಂಥ ಸಂಪ್ರದಾಯವಾದಿ ರಾಷ್ಟ್ರಗಳಲ್ಲಿ ಹೇರಲ್ಪಟ್ಟ ಮೌಲ್ಯಗಳು ಮಹಿಳೆಯರನ್ನು ಅವಕಾಶ ವಂಚಿತರನ್ನಾಗಿಸಿವೆ’ ಎಂದು ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ ನಿರ್ದೇಶಕ ‍ಜಯಂತಮೂರ್ತಿ ಅಭಿಪ್ರಾಯಪಟ್ಟರು.

ವಿಜ್ಞಾನಕ್ಕಾಗಿ ವಿಶ್ವ ನಡಿಗೆ ಜಾಥದ ಅಂಗವಾಗಿ ಬ್ರೇಕ್ ಥ್ರೂ ಸೈನ್ಸ್ ಸಂಸ್ಥೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ವಿಜ್ಞಾನದಲ್ಲಿ ಮಹಿಳೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮಹಿಳೆ ಮೊದಲು ಈ ಸಾಮಾಜಿಕ ಬೇಡಿಯನ್ನು ಕಳಚಿಕೊಂಡು ಹೊರಬರಬೇಕು. ಹೊರಬಂದ ಮೇಲೆ ತಾನು ಎದುರಿಸಿದ ಸಮಸ್ಯೆಗಳ ಕುರಿತು ಗಟ್ಟಿಯಾಗಿ ಮಾತನಾಡಬೇಕು. ಆಗ ಮಾತ್ರ ವೈಜ್ಞಾನಿಕ ಜೀವನಕ್ಕೆ ತೆರೆದುಕೊಳ್ಳಲು ಸಾಧ್ಯ’ ಎಂದು ಹೇಳಿದರು.

ADVERTISEMENT

ಖಭೌತ ವಿಜ್ಞಾನಿ ಡಾ.ಪ್ರಜ್ವಲ್‌ ಶಾಸ್ತ್ರಿ ಮಾತನಾಡಿ,‘ವಿಜ್ಞಾನ ಎಂದರೆ ಕೇವಲ ವಿಷಯವಲ್ಲ. ಅದೊಂದುಜೀವನ ವಿಧಾನ ಮತ್ತು ಚಿಂತನಾ ಕ್ರಮ. ದಿನನಿತ್ಯದ ಜೀವನದಲ್ಲಿ ಅದರ ಪರಿಣಾಮ ಅಗಾಧ’ ಎಂದು ಹೇಳಿದರು.

‘ಮಹಿಳೆ ಸೀರೆ ತೊಡಬೇಕು ಎನ್ನುವುದು ಪ್ರಕೃತಿಯಿಂದ ಬಂದಿದ್ದಲ್ಲ. ಅದು ಪುರುಷ ಪ್ರಧಾನ ಸಮಾಜದಿಂದ ಹೇರಲ್ಪಟ್ಟಿದ್ದು. ಇಂದು ಲಿಂಗ ಅಸಮಾನತೆ ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿದೆ. ಅದು ವಿಜ್ಞಾನ ಕ್ಷೇತ್ರವನ್ನೂ ಬಿಟ್ಟಿಲ್ಲ. ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚುವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳಲು ಸೂಚಿಸಬೇಕು’ ಎಂದರು.

ಅಖಿಲ ಭಾರತ ಜನವಿಜ್ಞಾನ ಜಾಲದ ಅಧ್ಯಕ್ಷ ಎಸ್‌.ಚಟರ್ಜಿ, ‘ಜಗತ್ತಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಕಲ್ಪನೆ ನೀಡಿದ ಫ್ರಾನ್ಸ್‌ನಲ್ಲಿಯೂ ಅಸಮಾನತೆ ಇತ್ತು. 1666ರಲ್ಲಿ ಸ್ಥಾಪನೆಯಾದಫ್ರೆಂಚ್‌ ಅಕಾಡೆಮಿ ಆಫ್‌ ಸೈನ್ಸ್‌ನ 780 ಜನ ಸದಸ್ಯರಲ್ಲಿ ಕೇವಲ 6 ಮಹಿಳಾ ಸದಸ್ಯೆಯರು ಇದ್ದರು. ಇದರ ಮಧ್ಯೆಯೂ ಹಲವಾರು ಮಹಿಳೆಯರು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇನ್ನೂ ಹೆಚ್ಚು ಸಾಧಿಸಬೇಕಾದ ಅಗತ್ಯವಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.