ADVERTISEMENT

ಬೆಂಗಳೂರು | ಮೆಟ್ರೊದಿಂದ ಸೇವಾಶುಲ್ಕ: ಶೀಘ್ರ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2023, 16:23 IST
Last Updated 29 ನವೆಂಬರ್ 2023, 16:23 IST
<div class="paragraphs"><p>ನಮ್ಮ ಮೆಟ್ರೊ</p></div>

ನಮ್ಮ ಮೆಟ್ರೊ

   

ಬೆಂಗಳೂರು: ಸರ್ಕಾರದ ಆದೇಶದಂತೆ ಬಿಎಂಆರ್‌ಸಿಎಲ್‌– ಮೆಟ್ರೊ ನಿಲ್ದಾಣಗಳ ಆಸ್ತಿಗಳಿಂದ ಸೇವಾ ಶುಲ್ಕ ಸಂಗ್ರಹಿಸಲು ಸುತ್ತೋಲೆ ಹೊರಡಿಸಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಬಿಎಂಆರ್‌ಸಿಎಲ್‌ನ ನಿಲ್ದಾಣ, ಕಚೇರಿ, ಡಿಪೊ ಸೇರಿದಂತೆ ವಿವಿಧ ಆಸ್ತಿಗಳಿಂದ ಆಸ್ತಿ ತೆರಿಗೆ ಪಡೆಯಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ 2019ರಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಅದರಂತೆ 2020ರ ಡಿ.9ರಿಂದ ತೆರಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಸರ್ಕಾರದ ಆದೇಶ, ಒಪ್ಪಂದದ ನಂತರ 2022ರಲ್ಲಿ ನಡೆದ ಸಭೆಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ, ನಿಯಮಗಳ ಅಳವಡಿಕೆ ಬಗ್ಗೆ ಚರ್ಚಿಸಲಾಯಿತು. 2020ರ ಡಿ.9ರಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ ಪಾವತಿಸುವಂತೆ ಆದೇಶ ನೀಡಬೇಕು ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅದರಂತೆ 2023ರ ಆ.19ರಂದು ಸರ್ಕಾರ ಆದೇಶ ಹೊರಡಿಸಿದ್ದು, ಅದರಂತೆ ಸೇವಾ ಶುಲ್ಕ ಪಾವತಿಸಬೇಕಿದೆ. ಇದರ ಸವಿವರ ಸುತ್ತೋಲೆಯನ್ನು ಬಿಬಿಎಂಪಿ ಸದ್ಯವೇ ಹೊರಡಿಸಿ, ಅದನ್ನು ವಸೂಲಿ ಮಾಡಲಿದೆ ಎಂದು ಹೇಳಿದರು.

2019ರಿಂದ ಬಾಕಿ

2019ರಿಂದ ಪ್ರಸ್ತಾವದಲ್ಲಿದ್ದ ಬಿಎಂಆರ್‌ಸಿಎಲ್‌ ಆಸ್ತಿಗಳಿಗೆ ತೆರಿಗೆ ವಿಷಯ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಯಾವ ಬಾಬ್ತಿನಲ್ಲಿ ಹೆಚ್ಚು ವಸೂಲಿ ಸಾಧ್ಯ ಎಂಬುದರ ಪರಿಶೀಲನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಾಕಿ ಉಳಿದಿದ್ದ ನಮ್ಮ ಮೆಟ್ರೊದ ಸೇವಾ ಶುಲ್ಕ ಪ್ರಸ್ತಾವ ಪತ್ತೆಯಾಗಿದ್ದು, ಅದನ್ನು ಸರ್ಕಾರದಿಂದ ಆದೇಶ ಮಾಡಿಸಿಕೊಳ್ಳಲಾಗಿದೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಆರ್ಥಿಕ ಸಾಲಿನಲ್ಲಿ ₹4,500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ, ನಾವು ಇನ್ನೂ ₹3,000 ಕೋಟಿ ಆಸುಪಾಸಿನಲ್ಲೇ ಇದ್ದೇವೆ. ಇನ್ನು ನಾಲ್ಕು ತಿಂಗಳಲ್ಲಿ ವಸೂಲಿ ಪ್ರಕ್ರಿಯೆಗೆ ವೇಗ ನೀಡಲಾಗುತ್ತಿದೆ’ ಎಂದು ಮುನೀಶ್ ಮೌದ್ಗಿಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.