ಬೆಂಗಳೂರು: ರಾಜ್ಯದ ಸ್ಮಶಾನ ಭೂಮಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ‘ಸತ್ಯ ಹರಿಶ್ಚಂದ್ರ ಬಳಗ’ ಎಂದು ಗುರುತಿಸಿ, ಪೌರ ಕಾರ್ಮಿಕರ ಸ್ಥಾನಮಾನ ನೀಡಲಾಗುವುದು. ಸೇವಾ ಭದ್ರತೆ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರೇಸ್‌ಕೋರ್ಸ್ ರಸ್ತೆಯ ತಮ್ಮ ನಿವಾಸದಲ್ಲಿ ಬುಧವಾರ ಸ್ಮಶಾನ ಕಾರ್ಮಿಕರ ಜತೆ ಉಪಾಹಾರ ಸ್ವೀಕರಿಸಿದ ನಂತರ ಅವರು ಮಾತನಾಡಿದರು.
ಬಿಬಿಎಂಪಿ ವ್ಯಾಪ್ತಿಯ 130 ಸ್ಮಶಾನ ಕಾರ್ಮಿಕರಿಗೆ ಈಗಾಗಲೇ ಪೌರ ಕಾರ್ಮಿಕರ ಸ್ಥಾನಮಾನ ನೀಡಿ, ಮಾಸಿಕ ₹ 14,400 ವೇತನ ನೀಡಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಸುಮಾರು 300 ಕಾರ್ಮಿಕರಿಗೂ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.
‘ಒಂದು ಕಾರ್ಯಕ್ರಮಕ್ಕೆ ಹೋದಾಗ ಸ್ಮಶಾನ ಕಾರ್ಮಿಕರೊಬ್ಬರ ಪರಿಸ್ಥಿತಿ ತಿಳಿದುಕೊಂಡೆ. ಏನಾದರೂ ಮಾಡಬೇಕು ಎಂದು ಅಂದೇ ನಿರ್ಧರಿಸಿದೆ. ಇದುವರೆಗೂ ಯಾವ ಸರ್ಕಾರಗಳೂ ಅವರನ್ನು ಗಮನಿಸಿಲ್ಲ. ಜನಪರ ಸರ್ಕಾರ ಇದ್ದಾಗ ಮಾತ್ರ ಈ ರೀತಿಯ ಆಲೋಚನೆ ಮಾಡಲು ಸಾಧ್ಯ ಎಂದರು.
ವಿದ್ಯುತ್ ಚಿತಾಗಾರಕ್ಕೆ ಆದ್ಯತೆ: ಕೋವಿಡ್ ಸಮಯದಲ್ಲಿ ಚಿತಾಗಾರಗಳ ಮುಂದೆ ಸರದಿ ಸಾಲು ಕಂಡು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿಗೆ ವಿದ್ಯುತ್ ಚಿತಾಗಾರ ಹೆಚ್ಚಳಕ್ಕೆ ಸೂಚಿಸಿದ್ದರು. ಈ ವರ್ಷದ ಬಜೆಟ್‌ನಲ್ಲಿ ಚಿತಾಗಾರ ವ್ಯವಸ್ಥೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಪಸ್ಥಿತರಿದ್ದರು.
ಪೂಜಾ ಸ್ಥಳದಲ್ಲಿ ಹರಿಶ್ಚಂದ್ರನ ಪ್ರತಿಮೆ
ಸ್ಮಶಾನ ಕಾರ್ಮಿಕರು ನೀಡಿದ ಕೋಲು ಹಿಡಿದು ನಿಂತ ಭಂಗಿಯ ಸತ್ಯ ಹರಿಶ್ಚಂದ್ರನ ಪ್ರತಿಮೆ ನೋಡಿ ಭಾವುಕರಾದ ಮುಖ್ಯಮಂತ್ರಿ, ‘ನನಗೆ ಇದುವರೆಗೆ ಸಾಕಷ್ಟು ಪುತ್ಥಳಿಗಳು ಬಂದಿವೆ. ಹರಿಶ್ಚಂದ್ರ ಪುತ್ಥಳಿ ನೀಡಿರಲಿಲ್ಲ. ಮನಸಿಗೆ ಅತ್ಯಂತ ಹತ್ತಿರವಾದ ಸ್ಮರಣಿಕೆ. ಇದನ್ನು ಪ್ರತಿ ದಿನ ಪೂಜಿಸುವ ಸ್ಥಳದಲ್ಲಿ ಇಟ್ಟುಕೊಳ್ಳುತ್ತೇನೆ’ ಎಂದರು.
ಬೇಡಿಕೆ ಈಡೇರಿಕೆಗೆ ಕೋರಿಕೆ
ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ಸ್ಮಶಾನ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಕೋರಿ ಪ್ರಬುದ್ಧ ಡಾ.ಬಿ.ಆರ್.ಅಂಬೇಡ್ಕರ್ ರುದ್ರಭೂಮಿ ಮತ್ತು ವಿದ್ಯುತ್ ಚಿತಾಗಾರ ನೌಕರರ ಸಂಘದ ಮುಖಂಡರು ಮುಖ್ಯಮಂತ್ರಿಗೆ ಮನವಿ ಮಾಡಿದರು. ನಿವೃತ್ತಿ ನಂತರ ತಮ್ಮ ಕುಟುಂಬದ ಸದಸ್ಯರಿಗೇ ಉದ್ಯೋಗ ನೀಡಬೇಕು. ಸ್ವಂತ ಮನೆ ಕಟ್ಟಿಕೊಡಬೇಕು. ಆರೋಗ್ಯ ಸೌಲಭ್ಯ ಒದಗಿಸಬೇಕು. ಮಕ್ಕಳ ವಿದ್ಯಾಭ್ಯಾಸ, ಮದುವೆಗೆ ಸಹಾಯ ಸೇರಿದಂತೆ ಪೌರ ಕಾರ್ಮಿಕರಿಗೆ ನೀಡುವ ಎಲ್ಲ ಸವಲತ್ತು ಒದಗಿಸಬೇಕು ಎಂದು ಬೇಡಿಕೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.