ADVERTISEMENT

ಬೆಂಗಳೂರು | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 16:29 IST
Last Updated 26 ಏಪ್ರಿಲ್ 2024, 16:29 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ಎಂಟು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆರೋಪಿ ಪರಾರಿಯಾಗಿದ್ದು, ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೊರ ರಾಜ್ಯದ ಬಾಲಕಿ, ತಾಯಿ ಜೊತೆ ನಗರಕ್ಕೆ ಬಂದಿದ್ದಳು. ತಾಯಿ, ನಗರದ ವೃತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಲೂನ್ ಮಾರಿ ಜೀವನ ಸಾಗಿಸುತ್ತಿದ್ದರು. ತಾಯಿಗೆ ಮಾತು ಬರುತ್ತಿರಲಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜನರ ಓಡಾಟ ನಿರ್ಬಂಧಿಸಲಾಗಿದೆ. ಇದೇ ಸ್ಥಳದಲ್ಲಿ ಬಾಲಕಿ ಕುಳಿತುಕೊಂಡಿದ್ದರು. ತಾಯಿ ಬಲೂನ್ ಮಾರಲು ರಸ್ತೆಗೆ ಹೋಗಿದ್ದರು. ಬಾಲಕಿ ಬಳಿ ಹೋಗಿದ್ದ ಆರೋಪಿ, ತಿಂಡಿ ಕೊಡಿಸುವುದಾಗಿ ಹೇಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಬಾಲಕಿ ಚೀರಾಟ ಕೇಳಿ ತಾಯಿ ಸ್ಥಳಕ್ಕೆ ಹೋಗುವಷ್ಟರಲ್ಲೇ ಆರೋಪಿ ಪರಾರಿಯಾಗಿದ್ದಾನೆ’ ಎಂದು ತಿಳಿಸಿವೆ.

‘ತಾಯಿಗೆ ಮಾತು ಬಾರದಿದ್ದರಿಂದ, ರಕ್ಷಣೆಗಾಗಿ ಕೂಗಾಡಿದ್ದರು. ಸ್ಥಳದಲ್ಲಿ ಜನರು ಸೇರಿದ್ದರು. ಘಟನೆ ಬಗ್ಗೆ ವಿವರಿಸಲು ತಾಯಿಗೆ ಸಾಧ್ಯವಾಗಿರಲಿಲ್ಲ. ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಕೈ ಸನ್ನೆ ಮೂಲಕವೇ ತಾಯಿ ದೌರ್ಜನ್ಯದ ವಿಷಯ ತಿಳಿಸಿದ್ದರು. ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಯಿತು. ದೌರ್ಜನ್ಯ ನಡೆದಿರುವುದಾಗಿ ವೈದ್ಯರು ಹೇಳಿದರು’ ಎಂದು ಮೂಲಗಳು ಹೇಳಿವೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 54 ವರ್ಷದ ವ್ಯಕ್ತಿ ಕೃತ್ಯ ಎಸಗಿರುವ ಮಾಹಿತಿ ಇದ್ದು, ಆತನ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.