ADVERTISEMENT

ಬಾಲಕಿಗೆ ಲೈಂಗಿಕ ಕಿರುಕುಳ: ಕಾರ್ಪೆಂಟರ್‌ಗೆ 3 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 4:28 IST
Last Updated 7 ಜೂನ್ 2023, 4:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಾರ್ಪೆಂಟರ್ ಕೆಲಸಕ್ಕಾಗಿ ಮನೆಯೊಂದಕ್ಕೆ ಹೋಗಿದ್ದ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಬೀರ್ ಅದಕ್‌ (42) ಎಂಬಾತನಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಆದೇಶ ಹೊರಡಿಸಿದೆ.

ಬೆಳ್ಳಂದೂರು ಠಾಣೆಯಲ್ಲಿ 2017ರಲ್ಲಿ ದಾಖಲಾಗಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಕೆ.ಎನ್. ರೂಪಾ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಕೃಷ್ಣವೇಣಿ ವಾದಿಸಿದ್ದರು.

‘ಕೈಕೊಂಡ್ರಹಳ್ಳಿಯ ನಿವಾಸಿ ಪ್ರಬೀರ್, ಕಾರ್ಪೆಂಟರ್‌ ಕೆಲಸಕ್ಕೆಂದು ಬಾಲಕಿಯ ಮನೆಗೆ ಹೋಗಿದ್ದ. ಇದೇ ಸಂದರ್ಭದಲ್ಲಿ ಪೆನ್‌ ಸ್ಟ್ಯಾಂಡ್ ಅಳವಡಿಸುವುದಕ್ಕಾಗಿ ಗೋಡೆಯಲ್ಲಿ ಗುರುತು ಮಾಡಲು ಬಾಲಕಿಯನ್ನು ಸಹಾಯಕ್ಕೆ ಕರೆದಿದ್ದ. ಸಹಾಯಕ್ಕೆ ಬಂದಿದ್ದ ಬಾಲಕಿಯನ್ನು ಹಿಡಿದುಕೊಂಡಿದ್ದ ಆರೋಪಿ, ಮೈ–ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ’ ಎಂದು ಕೃಷ್ಣವೇಣಿ ತಿಳಿಸಿದರು.

ADVERTISEMENT

‘ಕಿರುಕುಳದಿಂದ ಗಾಬರಿಗೊಂಡ ಬಾಲಕಿ ಚೀರಾಡಿದ್ದಳು. ಸ್ಥಳಕ್ಕೆ ಬಂದಿದ್ದ ತಾಯಿ, ಆರೋಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ, ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಇನ್‌ಸ್ಪೆಕ್ಟರ್ ವಿಕ್ಟರ್ ಸೈಮನ್, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದರು.

‘ಅಪರಾಧಿಗೆ ಶಿಕ್ಷೆ ಜೊತೆ ₹ 25 ಸಾವಿರ ದಂಡವನ್ನೂ ವಿಧಿಸಲಾಗಿದೆ. ಬಾಲಕಿಗೆ ₹ 50 ಸಾವಿರ ಪರಿಹಾರ ನೀಡವಂತೆಯೂ ನ್ಯಾಯಾಲಯ ನಿರ್ದೇಶನ ನೀಡಿದೆ’ ಎಂದು ಕೃಷ್ಣವೇಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.