ADVERTISEMENT

ಬೆಂಗಳೂರು | ಬಾಲಕಿ ಮೇಲೆ ದೌರ್ಜನ್ಯ: ಭದ್ರತಾ ಸಿಬ್ಬಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮೇ 2024, 15:14 IST
Last Updated 19 ಮೇ 2024, 15:14 IST
   

ಬೆಂಗಳೂರು: ಹತ್ತು ವರ್ಷ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ರಾಜೇಶ್ (55) ಎಂಬುವವರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ರಾಜೇಶ್, ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ. ನಾಗೇನಹಳ್ಳಿ ಬಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸರು ಹೇಳಿದರು.

‘ಸಂತ್ರಸ್ತ ಬಾಲಕಿಯ ಪೋಷಕರು ನೇಪಾಳದವರು. ಅವರು ಸಹ ಕೆಲಸ ಹುಡುಕಿಕೊಂಡು ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದಾರೆ. ನಾಗೇನಹಳ್ಳಿಯಲ್ಲಿರುವ ಮತ್ತೊಂದು ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಪೋಷಕರು ಕೆಲಸ ಮಾಡುತ್ತಿದ್ದರು. ಅವರ ಜೊತೆ ಬಾಲಕಿ ವಾಸವಿದ್ದಳು’ ಎಂದು ತಿಳಿಸಿದರು.

ADVERTISEMENT

ಚಾಕೊಲೇಟ್ ಆಮಿಷ: ‘ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಗಾಗ ಮಾತನಾಡಿಸುತ್ತಿದ್ದ. ಶನಿವಾರ ರಾತ್ರಿ ಬಾಲಕಿ ಬಳಿ ಹೋಗಿದ್ದ ಆರೋಪಿ, ಚಾಕೊಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಶೌಚಾಲಯದೊಳಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದ’ ಎಂದು ಪೊಲೀಸರು ಹೇಳಿದರು.

‘ದೌರ್ಜನ್ಯದ ಸಂಗತಿಯನ್ನು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಬಳಿಕವೇ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿ ರಾಜೇಶ್‌ನನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.